ದಾನಗಳಲ್ಲಿ ಅತಿ ಶ್ರೇಷ್ಠ ದಾನವೆಂದರೆ ಅದು ರಕ್ತದಾನ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಅನೇಕರು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಅವರಲ್ಲಿ ಭಟ್ಕಳ ಬಂದರ್ ಮಾವಿನಕುರ್ವೆ ನಿವಾಸಿಯಾಗಿರುವ ಮಂಜುನಾಥ್ ಒಮಯ್ಯ ಖಾರ್ವಿಯವರು ಪ್ರಮುಖರಾಗಿದ್ದು, ಹಲವಾರು ಸಮಾಜಮುಖಿ ಕಾರ್ಯಗಳಿಂದ ಅವರ ಬದುಕು ಧನ್ಯವಾಗಿದೆ.
1992 ರ ದಶಕದಲ್ಲಿ ಭಟ್ಕಳ ಕೋಮು ಗಲಭೆಗಳಿಂದ ನಲುಗುತ್ತಿತ್ತು ಆ ಸಮಯದಲ್ಲಿ ಅನೇಕರು ದಾಳಿಗೆ ತುತ್ತಾಗಿ ಜೀವನ್ಮರಣದ ಹೋರಾಟ ಮಾಡುತ್ತಿದ್ದರು ಭಟ್ಕಳದ ಖ್ಯಾತ ವೈದ್ಯ ಮತ್ತು ಸಚ್ಚಾರಿತ್ಯದ ರಾಜಕಾರಣಿ ಡಾಕ್ಟರ್ ಚಿತ್ತರಂಜನ್ ರವರು ಕೋಮುಗಲಭೆಯಲ್ಲಿ ದಾಳಿಗೊಳಗಾದ ಮಂದಿಗೆ ನೆರವಾಗಲು ರಕ್ತದಾನ ಶಿಬಿರ ಏರ್ಪಡಿಸಿದ್ದರು ಇದರಲ್ಲಿ ಸುಮಾರು 98 ಬಾಟಲ್ ರಕ್ತ ಸಂಗ್ರಹವಾಗಿತ್ತು. ಈ ರಕ್ತದಾನ ಶಿಬಿರದ ಮಾನವೀಯ ಕಾರ್ಯಗಳು ಮಂಜುನಾಥ ಖಾರ್ವಿಯವರ ಮೇಲೆ ಅಪಾರವಾದ ಪರಿಣಾಮವನ್ನು ಉಂಟು ಮಾಡಿದವು ಅಂದೇ ರಕ್ತದಾನ ಮಾಡಲು ಸಂಕಲ್ಪಿಸಿಕೊಂಡ ಅವರು ಜೀವ ಉಳಿಸುವ ಸತ್ಕಾರ್ಯಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು ಡಾಕ್ಟರ್ ಚಿತ್ತರಂಜನ್ ರವರ ಸಾಂಗತ್ಯದಲ್ಲಿ ಮಂಜುನಾಥ ಖಾರ್ವಿಯವರ ಮಾನವೀಯ ಸಂಕಲ್ಪದ ಜೀವನ್ಮುಖಿ ಸೇವಾಕಾರ್ಯಗಳು ದೃಡತೆಯ ಹೆಜ್ಜೆಗಳನ್ನು ಹಾಕಿದವು.
1992 ರಿಂದ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಮಂಜುನಾಥ ಖಾರ್ವಿಯವರು ಅಂದಿನಿಂದ ಇಂದಿನವರೆಗೂ 60 ಬಾರಿ ರಕ್ತದಾನ ಮಾಡಿದ್ದಾರೆ ಸತತ 24 ವರ್ಷಗಳಲ್ಲಿ 60 ಬಾರಿ ರೋಗಿಗಳ ಜೀವ ಉಳಿಸಲು ರಕ್ತದಾನ ಮಾಡಿರುವ ಅವರು ಇದರ ಜೊತೆಗೆ ಅಸಂಖ್ಯಾತ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಮಾರ್ಗದರ್ಶನ, ಸಹಾಯ ಹಾಗೂ ಬಡ ರೋಗಿಗಳಿಗೆ ಸಂಘ ಸಂಸ್ಥೆಗಳ ನೆರವಿನಿಂದ ಆರ್ಥಿಕ ನೆರವು ಕೊಡಿಸುವ ಸೇವಾಕಾರ್ಯ ಮಾಡುತ್ತಾ ಬಂದಿರುತ್ತಾರೆ.
ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರೂ ಸಮಾಜಸೇವೆಯ ಅವರ ತುಡಿತ ಅವರನ್ನು ಮತ್ತೆ ಭಟ್ಕಳಕ್ಕೆ ಕರೆದುಕೊಂಡು ಬಂತು. ಅಸಹಾಯಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಮಂಜುನಾಥ ಖಾರ್ವಿಯವರು ಅಲ್ಲಿ ರೋಗಿಗಳು ರಕ್ತಕ್ಕಾಗಿ ಪಡುತ್ತಿರುವ ಬವಣೆಯನ್ನು ಕಣ್ಣಾರೆ ಕಂಡರು. ಈ ಸಂದರ್ಭದಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ರೋಗಿಯೊಬ್ಬರೊಂದಿಗೆ ಇದ್ದ ಅವರು ಪಕ್ಕದ ವಾರ್ಡ್ ನಲ್ಲಿ ರಕ್ತದ ತುರ್ತು ಅವಶ್ಯಕತೆ ಇದ್ದ ಗರ್ಭಿಣಿ ಮಹಿಳೆಗೆ ರಕ್ತ ನೀಡಿ ಮಾನವೀಯತೆ ಮೆರೆದರು. ಈ ಭಾವಾನಾತ್ಮಕ ಸಾಂಧರ್ಭಿಕ ಸನ್ನಿವೇಶ ಅವರ ಮನಸ್ಸಿನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡಿ ರಕ್ತದಾನದ ಬಗ್ಗೆ ವಿಶೇಷ ಕಳಕಳಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಪ್ರೇರಣೆ ನೀಡಿದವು.
ಧಾರ್ಮಿಕ ಸೇವೆಯೊಂದಿಗೆ ಸಮಾಜಸೇವೆ ಎಂಬ ಪರಿಕಲ್ಪನೆಯಡಿಯಲ್ಲಿ ಅವರು ಶ್ರೀ ಶಾರದಾ ಸೇವಾ ಸಮಿತಿಯನ್ನು ಹುಟ್ಟು ಹಾಕಿ ಸಂಸ್ಥಾಪಕ ಅಧ್ಯಕ್ಷರಾದರು. ಈ ಸಮಿತಿಯ ವತಿಯಿಂದ ಭಟ್ಕಳ ಮಾವಿನಕುರ್ವೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದರು ಮೊದಲ ವರ್ಷವೇ ರಕ್ತದಾನ ಶಿಬಿರವನ್ನು ಏರ್ಪಡಿಸಿ ಯಶಸ್ಸು ಕಂಡ ಅವರು ಬಳಿಕ ಭಟ್ಕಳದ ಗ್ರಾಮೀಣ ಪ್ರದೇಶವಾದ ಗೊರ್ಟೆ, ಮುಂಡಳ್ಳಿ ಮತ್ತು ಹೊನ್ನಾವರದಲ್ಲೂ ರಕ್ತದಾನ ಶಿಬಿರಗಳನ್ನು ಆಯೋಜಿಸಿದರು. ರಕ್ತದಾನ ಶಿಬಿರದ ಜೊತೆಗೆ ಎಡ್ಸ್, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ರೋಗಗಳ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.
ಇವರ ಅಪಾರವಾದ ಸಮಾಜಸೇವಾ ಕೈಂಕರ್ಯಗಳನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು, ತಾಲೂಕು ಆಡಳಿತ ಸನ್ಮಾನ ಮಾಡಿ ಗೌರವಿಸಿದೆ. ಮಣಿಪಾಲ ಆಸ್ಪತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮಂಜುನಾಥ ಖಾರ್ವಿಯವರನ್ನು ಅತ್ಯುತ್ತಮ ಸೇವೆಗಾಗಿ ಮಣಿಪಾಲ ಯೂನಿವರ್ಸಿಟಿ 2016 ರಲ್ಲಿ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಗೌರವಿಸಿದೆ. ಇವೆಲ್ಲವೂ ನಿಸ್ವಾರ್ಥ ಮನೋಭಾವದ ಸಮಾಜ ಸೇವಕ, ಮಹಾ ರಕ್ತದಾನಿ ಮಂಜುನಾಥ ಖಾರ್ವಿಯವರಿಗೆ ಸಂದ ಅತ್ಯುನ್ನತ ಗೌರವವಾಗಿದೆ.
ಶ್ರೀ ಶಾರದಾ ಸೇವಾ ಸಮಿತಿ ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಶಿರೂರಿನಿಂದ ಹಿಡಿದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತನಕ ಸುಮಾರು 100 ಕ್ಕೂ ಹೆಚ್ಚು ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ಆಯೋಜಿಸಿರುವ ಮಂಜುನಾಥ ಖಾರ್ವಿಯವರು ಸರ್ಕಾರದ ಆರೋಗ್ಯ ಭಾಗ್ಯ ಯೋಜನೆಗಳಾದ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಇತ್ಯಾದಿ ಯೋಜನೆಗಳ ಬಗ್ಗೆ ಜನರಿಗೆ ವಿಶೇಷ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ರಕ್ತದಾನಿಗಳ ಸಮೀಪ ಹೃದಯಾಘಾತ ಸುಳಿಯುವುದಿಲ್ಲವೆಂದು 2010 ರಲ್ಲಿ ಫಿನ್ ಲ್ಯಾಂಡ್ ವೈದ್ಯ ವಿಜ್ಞಾನಿಗಳ ಸಂಶೋಧನಾ ವರದಿ ಪ್ರಕಟಗೊಂಡು ಜಗತ್ತಿನ ಗಮನ ಸೆಳೆಯಿತು. ವಿಜ್ಞಾನಿಗಳ ಹತ್ತಾರು ವರ್ಷಗಳ ಅಧ್ಯಯನದ ಫಲ ಇದು ಸಹಸ್ರಾರು ಜನರನ್ನು ಅಭ್ಯಸಿಸಿ, ವಿವರ ಸಂಗ್ರಹಿಸಿ, ವಿಷಯ ವಿಶ್ಲೇಷಿಸಿ, ವಿಮರ್ಶಿಸಿ ವಿಜ್ಞಾನಿಗಳು ಈ ಅಧ್ಯಯನ ವರದಿಯನ್ನು ಪ್ರಕಟಿಸಿದರು ಈ ಸುದ್ದಿ ರಕ್ತ ಕೊಡಲು ಹಿಂದೇಟು ಹಾಕುವವರಿಗೆ ಹುರುಪು, ಧೈರ್ಯವನ್ನು ತುಂಬುವಲ್ಲಿ ಯಶಸ್ವಿಯಾಯಿತು.
ಹದಿನೆಂಟರಿಂದ ಆರವತ್ತು ವರ್ಷದೊಳಗಿನ ಎಲ್ಲ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡಿದ ಕೆಲವು ಗಂಟೆಯೊಳಗೆ ಅಷ್ಟೇ ಪ್ರಮಾಣದ ರಕ್ತವು ದಾನಿಯ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಎಂದು ಹೇಳುವ ಮಂಜುನಾಥ್ ಖಾರ್ವಿಯವರು ರಕ್ತದಾನದ ಬಗ್ಗೆ ಅಪಾರ ಜ್ಞಾನ ಹೊಂದಿರುತ್ತಾರೆ.
ನೂರಾರು ಜನರಿಗೆ ರಕ್ತದಾನ ಮಾಡಿ, ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಮಂಜುನಾಥ ಒಮಯ್ಯ ಖಾರ್ವಿಯವರ ಸೇವಾಕೈಂಕರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರ ಸತ್ಕಾರ್ಯಗಳು ಎಲ್ಲರಿಗೂ ಆದರ್ಶವಾಗಿದೆ. ತನ್ನ ಬದುಕನ್ನು ಸಮಾಜಸೇವೆಗಾಗಿ ಸಮರ್ಪಿಸಿಕೊಂಡಿರುವ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆಯನ್ನು ಹೊಂದಿರುತ್ತಾರೆ. ಜನರು ಮಂಜುನಾಥ ಖಾರ್ವಿಯವರನ್ನು ಪ್ರೀತಿಯಿಂದ ರಾಜ್ ಕುಮಾರ್ ಎಂದು ಕರೆಯುತ್ತಾರೆ. ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಕಾಲವೂ ಕೂಡಾ ಅಳಿಸಲಾಗದ ಹೆಜ್ಜೆಗುರುತುಗಳನ್ನು ದಾಖಲಿಸಿದ ವರನಟ ರಾಜ್ ಕುಮಾರ್ ರಂತೆ ಹೃದಯವಂತ ಸಮಾಜಸೇವಕ, ಮಹಾರಕ್ತದಾನಿಯಾಗಿರುವ ಮಂಜುನಾಥ್ ಒಮಯ್ಯ ಖಾರ್ವಿಯವರ ಕೀರ್ತಿ ಎಲ್ಲೆಡೆ ಮೊಳಗಲಿ. ಸಮಾಜಕ್ಕಾಗಿ ಎಲ್ಲವನ್ನು ಸಮರ್ಪಿಸಿದ ತಮ್ಮ ಅವಿರತ ಸಾಧನೆ ನೇತ್ರದಾನ ಮಾಡುವ ದೀಕ್ಷೆಯಿಂದ ಮತ್ತಷ್ಟೂ ಸಾರ್ಥಕತೆ ಪಡೆದುಕೊಂಡಿದೆ. ತಮಗೆ ತಮ್ಮ ಕುಟುಂಬಕ್ಕೆ ಶ್ರೀ ದೇವರು ಸನ್ಮಂಗಳವನ್ನುಂಟು ಮಾಡಲಿ ಎಂದು ಖಾರ್ವಿ ಆನ್ಲೈನ್ ತುಂಬು ಹೃದಯದಿಂದ ಹಾರೈಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com