ಸಮಾಜಕ್ಕೆ ಮಾದರಿಯಾದ ಕಾಸರಕೋಡು ಟೊಂಕ ಮೀನುಗಾರರ ಕಡಲು ಸ್ವಚ್ಛತಾ ಕಾರ್ಯಕ್ರಮ

ಕಡಲತೀರದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ.ಅದು ನಿತ್ಯೋತ್ಸವ ಆಗಬೇಕು. ಜೊತೆಗೆ ಬಂಡವಾಳಶಾಹಿಗಳ ಅಭಿವೃದ್ಧಿಯ ಹೆಸರಿನ ವಾಣಿಜ್ಯಕರಣದಿಂದ ರಕ್ಷಿಸಬೇಕಾಗಿದೆ. ಇದನ್ನು ಹೊನ್ನಾವರ ಕಾಸರಕೋಡು ಟೊಂಕ ಕೊಂಕಣಿ ಖಾರ್ವಿ ಮೀನುಗಾರರು ಯಶಸ್ವಿಯಾಗಿ ಸಂಪನ್ನಗೊಳಿಸಿದ್ದಾರೆ. ಈ ಕಡಲ ಮಕ್ಕಳಿಗೆ ಕರಾವಳಿ ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಲ್ಲ ಅದು ಅವರಿಗೆ ನಿರಂತರ ಪವಿತ್ರ ಕಾಯಕ ಕಡಲ ಸ್ವಚ್ಛತೆಯೊಂದಿಗೆ ಅವರು ಕಾಸರಕೋಡು ಟೊಂಕ ಕಡಲತೀರದ ಮನೆ ಮಗಳಾದ ಆಲೀವ್ ರಿಡ್ಲೆ ಪ್ರಭೇದದ ಕಡಲಾಮೆಗಳನ್ನು ಜತನದಿಂದ ಪೊರೆಯುತ್ತ ಬಂದಿದ್ದಾರೆ.

ತಮ್ಮ ಅನ್ನದ ಬಟ್ಟಲಾಗಿರುವ ಕಾಸರಕೋಡು ಟೊಂಕ ಕಡಲತೀರವನ್ನು ವಾಣಿಜ್ಯ ಬಂದರು ನಿರ್ಮಾಣದ ಕಪ್ಪುದೈತ್ಯರಿಂದ ರಕ್ಷಿಸಿಕೊಳ್ಳಲು ನಿರಂತರ ಹೋರಾಟ ನಡೆಸಿ ತಾರ್ಕಿಕ ಅಂತ್ಯದತ್ತ ತೆಗೆದುಕೊಂಡು ಹೋಗಿದ್ದಾರೆ. ಕಡಲಾಮೆಗಳ ಸಂರಕ್ಷಣೆಯ ಸೂಕ್ಷ್ಮ ಕಡಲತೀರವನ್ನು ಕಾನೂನುಬಾಹಿರವಾಗಿ ದ್ವಂಸಗೊಳಿಸಿ ಕಡಲಮಕ್ಕಳನ್ನು ಬೀದಿಗೆ ತಳ್ಳುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ತಡೆ ನೀಡಿದೆ. ಇದರಿಂದ ಕಪ್ಪು ದೈತ್ಯರ ಉಸಿರು ನಿಂತಂತಿದೆ. ಇದೊಂದು ಐತಿಹಾಸಿಕ ದಾಖಲೆಯಾಗಿದ್ದು, ಕಡಲತಡಿಯ ಸಂರಕ್ಷಣೆಯ ಮಹೋನ್ನತ ಸಾಧನೆಯಾಗಿದೆ.

ನಿರಂತರ ಎರಡು ವರ್ಷಗಳಿಂದ ಕಾಸರಕೋಡು ಟೊಂಕದ ಮೀನುಗಾರರು ನಡೆಸಿದ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನದಲ್ಲಿ ನಾನು ಪಾಲ್ಗೊಂಡಿದ್ದೆ. ಕಳೆದ ವರ್ಷ ಈ ಭಾಗದಲ್ಲಿ ಕಡಲಿನ ಸ್ವಚ್ಛತೆ ಕಾರ್ಯಕ್ರಮ ನಡೆಯುತ್ತಿದ್ದಾಗ ಆಕ್ಷೇಪ ಎತ್ತಿದ ಕಪ್ಪು ದೈತ್ಯರು ಅವರ ಗುಲಾಮರು ಈಗ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ನಮ್ಮ ಸಮಾಜದ ಹೆಮ್ಮೆಯ ಕಡಲ ವಿಜ್ಞಾನಿಯವರ ಸಮರ್ಥ ಮತ್ತು ಸಮಯೋಚಿತ ಮಾರ್ಗದರ್ಶನದಲ್ಲಿ ನಿನ್ನೆ ನಡೆದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲತೀರವನ್ನುಸ್ವಚ್ಛಗೊಳಿಸಿದ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರು, ಮಹಿಳೆಯರು ಇತರರಿಗೆ ಮಾದರಿಯಾಗುವಂತೆ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.

ನಮ್ಮ ಸಮುದ್ರ ನಮ್ಮ ಭವಿಷ್ಯ ಎಂಬ ಧ್ಯೇಯವಾಕ್ಯದ ನೆಲೆಯಲ್ಲಿ ಅವರು ಕಾಸರಕೋಡು ಟೊಂಕದ ಕಡಲತೀರದ ಸ್ವಚ್ಛತೆ ಮತ್ತು ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಾದಂತ್ಯ ಅಂತರಾಷ್ಟ್ರೀಯ ಕಡಲು ಸ್ವಚ್ಛತಾ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿದೆ. ಕಾರವಾರದಲ್ಲಿ ಮೀನುಗಾರರನ್ನು ಹೊರಗಿಟ್ಟುಕೊಂಡು ಕಾರ್ಯಕ್ರಮ ನಡೆಸಲಾಗಿದೆ. ವಿವಿಧ ಸಮಾಜ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿನ್ನೆ ಕಾಸರಕೋಡು ಟೊಂಕದಲ್ಲಿ ಕೊಂಕಣಿ ಖಾರ್ವಿ ಮೀನುಗಾರರು ನಡೆಸಿದ ಕಡಲು ಸ್ವಚ್ಛತಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ನಿತ್ಯ ನಿರಂತರವಾಗಿ ಅಸಾಮಾನ್ಯ ಪರಿಸ್ಥಿತಿಯಲ್ಲೂ ದಿಟ್ಟತನದಿಂದ ಕಾಸರಕೋಡು ಟೊಂಕ ಕಡಲತೀರವನ್ನು ಸಂರಕ್ಷಣೆ ಮಾಡಲು ಹೋರಾಟ ನಡೆಸುತ್ತಿರುವ ಅವರಿಗೆ ಅಭಿನಂದನೆಗಳು. ಅವರ ನಮ್ಮ ಸಮುದ್ರ,ನಮ್ಮ ಭವಿಷ್ಯ ಅಭಿಯಾನ ಸಮಾಜಕ್ಕೆ ಉತ್ತಮ ಮಾದರಿಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

2 thoughts on “ಸಮಾಜಕ್ಕೆ ಮಾದರಿಯಾದ ಕಾಸರಕೋಡು ಟೊಂಕ ಮೀನುಗಾರರ ಕಡಲು ಸ್ವಚ್ಛತಾ ಕಾರ್ಯಕ್ರಮ

  1. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಕ್ಷತ್ರಿಯರ ಧರ್ಮದ 18-43 ಶ್ಲೋಕದಲ್ಲಿ ಈ ಕೆಳಗಿನಂತೆ ಹೇಳಿದ್ದಾನೆ:

    “ಸೌರ್ಯಂ ತೇಜೋ ಧೃತಿರ್ ದಾಕ್ಷ್ಯಂ ಯುದ್ಧೇ ಚಾಪ್ಯ ಪಲಾಯನಂ , ದಾನಂ ಈಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್”. (18–43).

    ಇದರರ್ಥ “ಶೌರ್ಯ, ಶಕ್ತಿ, ದೃಢತೆ, ದಕ್ಷತೆ, ಯುದ್ಧದಿಂದ ಎಂದಿಗೂ ಪಲಾಯನ ಮಾಡದಿರುವ ಗುಣ, ಔದಾರ್ಯ ಮತ್ತು ಸಾಮಾಜಿಕ ಆಡಳಿತ – ಇವು ಕ್ಷತ್ರಿಯನ ಸಹಜ ಧರ್ಮ”.

    ನಿಜವಾದ ಕ್ಷತ್ರಿಯರ ಶೌರ್ಯ, ಶಕ್ತಿ, ದೃಢತೆ, ದಕ್ಷತೆ, ಈ ಎಲ್ಲಾ ಗುಣಗಳನ್ನು ಕಾಸರಗೋಡಿನ ಟೊಂಕದ ನಮ್ಮ ಸಮುದಾಯದ ಪುರುಷರು ಮತ್ತು ಮಹಿಳೆಯರು ತೋರಿಸಿದ್ದಾರೆ ಎಂದು ನಾನು ನಂಬುತ್ತೇನೆ … ನಾನು ಕಂಡ ಪ್ರಕಾರ ಕಳೆದೆರಡು ವರ್ಷಗಳಲ್ಲಿ ಅವರಿಗಾದ ಸಮಸ್ಯೆಗಳಿಂದ ಪಲಾಯನ ಮಾಡದೆ ಎಲ್ಲವನ್ನೂ ಎದುರಿಸಿದ ರೀತಿಯನ್ನು ಆಧರಿಸಿ ನಾನು ಇದನ್ನು ಹೇಳುತ್ತೇನೆ. ದೇವರು ಅವರಿಗೆ ಹೆಚ್ಚಿನ ಜನ-ಬಲ, ಹಣಬಲ ಮತ್ತು ಮಾರ್ಗದರ್ಶಕರಿಂದ ಒಳ್ಳೆ ಮಾರ್ಗದರ್ಶನ ಸಿಕ್ಕು … ಅವರ ಪ್ರಸ್ತುತ ಮತ್ತು ಅವರ ಮುಂದಿನ ಪೀಳಿಗೆ ಹೆಚ್ಚು ಬಲವಾದ, ಸಮೃದ್ಧ ಮತ್ತು ಮದರಿ ಕ್ಷೇತ್ರವಾಗಿ ಬೆಳೆಯಲಿ.

    1. ಧನ್ಯವಾದ ರಾಮ್ ಪ್ರಸನ್ನರವರೆ. ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನ ನಮ್ಮ ಸಮುದಾಯಕ್ಕೆ ಸದಾಕಾಲ ಇಗೆ ಇರಲಿ….

      ನಮ್ಮ ಸಮುದ್ರ…
      ನಮ್ಮ ಭವಿಷ್ಯ….

Leave a Reply

Your email address will not be published. Required fields are marked *