ಪದ್ಮಪುರಾಣದಲ್ಲಿ ವಿದಿತವಾದಂತೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇಗುಲವು ಪಿತೃಸದ್ಗತಿ ಮತ್ತು ಪ್ರೇತಮೋಕ್ಷಾದಿ ಕಾರ್ಯಗಳಿಗೆ ಪುಣ್ಯಪ್ರದ ಕ್ಷೇತ್ರವಾಗಿದೆ. ಇಲ್ಲಿ ಪುರಾತನ ಕಾಲದಿಂದಲೂ ಜನರು ಪ್ರೇತಮೋಕ್ಷಾದಿ ಸಂಸ್ಕಾರಗಳು, ಪಿತೃಸದ್ಗತಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.
ಕುಂದಾಪುರದಿಂದ ಪೂರ್ವಕ್ಕೆ 12 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರದ ಸ್ಥಳಪುರಾಣದಂತೆ ಒಮ್ಮೆ ನಾರದರು ದಕ್ಷಿಣ ದೇಶದಲ್ಲಿ ಸಂಚರಿಸುತ್ತಿದ್ದಾಗ ಒಂದೆಡೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಜಂಬೂ ಫಲಗಳನ್ನು ನೋಡುತ್ತಾರೆ. ಈ ಪಕ್ವವಾಗಿರುವ ಜಂಬೂ ಫಲಗಳನ್ನು ಶಿವನಿಗೆ ಸಮರ್ಪಿಸಬೇಕೆಂದು ನಿಶ್ಚಯಿಸಿ ಜಂಬೂ ಫಲವನ್ನು ಕಿತ್ತು ಶಿವನಿಗೆ ಅರ್ಪಿಸಲು ಆಕಾಶ ಮಾರ್ಗವಾಗಿ ಕೈಲಾಸದತ್ತ ಪ್ರಯಾಣ ಬೆಳೆಸುತ್ತಾರೆ. ಆಕಸ್ಮಿಕವಾಗಿ ಜಂಬೂ ಫಲಗಳು ನಾರದರ ಕೈಯಿಂದ ಜಾರಿ ವಾರಾಹಿ ನದಿಯ ಪಶ್ಚಿಮ ದಡದಲ್ಲಿ ಬೀಳುತ್ತದೆ. ತಕ್ಷಣವೇ ನಾರದರು ಕೆಳಗಿಳಿದು ಬಂದು ತಾನು ಶಿವನಿಗೆ ಸಮರ್ಪಿಸಬೇಕೆಂದು ಕೊಂಡೊಯ್ಯುತ್ತಿದ್ದ ಜಂಬೂ ಫಲಗಳು ಕೆಳಗೆ ಬಿದ್ದ ಕಾರಣವನ್ನು ದಿವ್ಯದೃಷ್ಟಿಯಿಂದ ನೋಡಿದಾಗ ಜಂಬೂ ಫಲಗಳು ಬಿದ್ದ ಸ್ಥಳದಲ್ಲಿ ಪರಮೇಶ್ವರನ ಸಾನ್ನಿಧ್ಯವಿರುವುದು ಗೋಚರವಾದ್ದರಿಂದ ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆಗೈಯ್ಯುತ್ತಾರೆ. ಆಗ ನಾರದರಿಗೆ ಶಿವನು ಪ್ರತ್ಯಕ್ಷನಾಗಿ ತಾನು ಈ ಕ್ಷೇತ್ರದಲ್ಲಿ ಸದಾಕಾಲವೂ ನೆಲೆಸಿ ನದಿಯಲ್ಲಿ ಸ್ನಾನ ಮಾಡಿ ತನ್ನನ್ನು ಪೂಜಿಸುವ ಭಕ್ತಾದಿಗಳಿಗೂ,ನದಿ ತೀರದಲ್ಲಿ ಪಿತೃಸದ್ಗತಿ, ಪ್ರೇತಮೋಕ್ಷಾದಿ ಕಾರ್ಯಗಳನ್ನು ನಡೆಸಿದಲ್ಲಿ ಪ್ರೇತಗಳಿಗೂ ಮೋಕ್ಷವನ್ನು ಕರುಣಿಸುತ್ತೇನೆಂದು ವಚನವೀಯುತ್ತಾನೆ.
ಪರಮೇಶ್ವರನು ಜಂಬೂ ಫಲವನ್ನು ಸ್ವೀಕರಿಸಿದ ಈ ಸ್ಥಳ ಜಂಬೂಕೇಶ್ವರನೆಂದೂ, ಜಂಬೂಫಲಗಳು ಬಿದ್ದ ವಾರಾಹಿ ನದಿಯ ಪಶ್ಚಿಮ ಭಾಗಕ್ಕೆ ಜಂಬೂನದಿಯೆಂದು ಹೆಸರು ಬಂತು. ಗೋಕರ್ಣದಷ್ಟೇ ಪವಿತ್ರವೂ, ಪ್ರಸಿದ್ಧವೂ ಆದ ಈ ಕ್ಷೇತ್ರದಲ್ಲಿ ಜನರು ಪಿತೃಸದ್ಗತಿ, ಪ್ರೇತಮೋಕ್ಷಾದಿ ಕ್ರಿಯಾದಿ ಕರ್ಮಗಳನ್ನು ನೇರವೇರಿಸುತ್ತಾರೆ. ಈ ಕ್ಷೇತ್ರ ಕಾಶಿಯಷ್ಟೇ ಪುಣ್ಯಪ್ರದವೆಂದು ಹೇಳಲಾಗಿದ್ದು, ಪ್ರತಿ ಅಮವಾಸ್ಯೆಯಲ್ಲಿ ಹೋಮ ಹವನಾದಿ ಕಾರ್ಯಗಳು ನಡೆಯುತ್ತದೆ. ಮಹಾಲಯ ಅಮವಾಸ್ಯೆಯಂದು ಇಲ್ಲಿ ಭಾರಿ ಪ್ರಮಾಣದಲ್ಲಿ ಜನರು ತಮ್ಮ ಪೂರ್ವ ಪಿತೃಗಳಿಗೆ ತರ್ಪಣ ನೀಡುವ ವಾಡಿಕೆಯಿದೆ. ಆ ದಿನ ರಾಜ್ಯ ಮತ್ತು ದೇಶದ ಮೂಲೆ ಮೂಲೆಗಳಿಂದ ಜನರು ಇಲ್ಲಿ ಬರುತ್ತಾರೆ.
ಈ ದೇಗುಲ ಈ ಕಾರಣಕ್ಕೆ ತುಂಬಾ ಪ್ರಸಿದ್ಧವಾಗಿದ್ದು,ಇಲ್ಲಿ ಪಿತೃಸದ್ಗತಿ ಕಾರ್ಯ ನಡೆಸಿದರೆ ಕಾಶಿಯಷ್ಟೇ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಕಾರ್ತಿಕ ಮಾಸದಲ್ಲಿ ಜಂಬೂಕೇಶ್ವರ ದೇಗುಲದಲ್ಲಿ ದೀಪೋತ್ಸವ ಅತ್ಯಂತ ಭಕ್ತಿಪ್ರದವಾಗಿ ನಡೆಯುತ್ತದೆ. ವಾರಾಹಿ ಜಂಬೂನದಿಗೆ ಗಂಗಾರತಿ ಎಂಬ ವೈಶಿಷ್ಟ್ಯಪೂರ್ಣ ಪೂಜಾ ಕಾರ್ಯಕ್ರಮ ನಡೆಯುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವ ಈ ದೇಗುಲ ನದಿಯಂಚಿಗೆ ತಾಗಿಕೊಂಡಿದ್ದು , ಇಲ್ಲಿ ಮೀನು ಹಿಡಿಯುವಂತಿಲ್ಲ ಇಲ್ಲಿರುವ ಮೀನುಗಳು ದೇವರ ಮೀನುಗಳು ಎಂಬ ಪ್ರತೀತಿ ಇದೆ ಹಚ್ಚ ಹಸಿರಿನ ಪ್ರಕೃತಿ ರಮಣೀಯ ತಾಣದಲ್ಲಿರುವ ಜಂಬೂಕೇಶ್ವರ ನನ್ನು ಕಣ್ತುಂಬಿಕೊಳ್ಳುವುದೇ ಮಹಾಭಾಗ್ಯ ಒಂದೇ ಪ್ರಾಕಾರದಲ್ಲಿ ಎರಡು ದೇವಾಲಯಗಳಿರುವುದು ಇಲ್ಲಿನ ವೈಶಿಷ್ಟ್ಯ ಕ್ಷೇತ್ರದ ಪ್ರಧಾನ ದೇವತೆ ಜಂಬೂಕೇಶ್ವರ ಇಲ್ಲಿ ನಾರದರಿಂದ ಶಿವಲಿಂಗ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ ಶಿವನ ಎದುರು ನಂದಿಯ ವಿಗ್ರಹವಿದೆ ಇದರ ಪಕ್ಕದಲ್ಲಿ ಗಣಪತಿಯ ಗುಡಿ ಇದೆ ದೇಗುಲಕ್ಕೆ ಸಂಬಂಧಿಸಿದಂತೆ ಒಂದು ಶಾಸನವಿದೆ ಅದರಲ್ಲಿ ನಂದಿ, ಶಿವಲಿಂಗ ಮತ್ತು ನಾರದರ ಕೆತ್ತನೆಯ ಕುರುಹುಗಳು ಇವೆ.
ಕಾಶಿ, ಗೋಕರ್ಣಕ್ಕೆ ಹೋಗಲು ಆಗದಿದ್ದವರು ಇಲ್ಲಿ ಪಿತೃಸದ್ಗತಿ ಕಾರ್ಯಗಳನ್ನು ನಡೆಸುತ್ತಾರೆ ಅತ್ಯಂತ ಶಾಸ್ತ್ರೋಕ್ತವಾಗಿ ಪಿತೃಸದ್ಗತಿ ಕ್ರಿಯಾದಿಗಳನ್ನು ಇಲ್ಲಿನ ಅರ್ಚಕರು ಮಾಡಿಕೊಡುತ್ತಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಪಿತೃಸದ್ಗತಿ ಕ್ರಿಯಾಧಿ ಕರ್ಮಗಳನ್ನು ಮಾಡಲು ಸೂಕ್ತ ವ್ಯವಸ್ಥೆ ಇರಲಿಲ್ಲ ಮಾಜಿ ಸಚಿವರಾಗಿರುವ ಶ್ರೀ ಜಯಪ್ರಕಾಶ್ ಹೆಗ್ಡೆಯವರು ಹೋಮ ಹವನಾದಿ ಕ್ರಿಯೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತವಾದ ಪಿತ್ರೈಕ ಮಂದಿರವನ್ನು ನಿರ್ಮಿಸಿ ಕೊಟ್ಟರು ನದಿದಂಡೆಯಲ್ಲಿ ಆಸ್ತಿ ವಿಸರ್ಜನೆ ಮತ್ತು ಸ್ನಾನ ಮಾಡಲು ಅನುಕೂಲವಾಗಲು ಸ್ಥಳೀಯ ವೈದ್ಯರೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ವ್ಯವಸ್ಥಿತವಾಗಿ ನದಿದಂಡೆಗೆ ಕಾಂಕ್ರೀಟ್ ಕಾಮಗಾರಿ ಮತ್ತು ಸರಳುಗಳನ್ನು ಆಳವಡಿಸಿ ಕೊಟ್ಟರು ನದಿದಂಡೆಯ ಈ ಭಾಗವನ್ನು ಭಾಗೀರಥಿ ಘಾಟ್ ಎಂದು ಕರೆಯುತ್ತಾರೆ ಅಮಾವಾಸ್ಯೆ ಮಾತ್ರವಲ್ಲ ಪ್ರತಿದಿನ ಈ ಕ್ಷೇತ್ರದಲ್ಲಿ ಪ್ರೇತಮೋಕ್ಷಾದಿ ಕಾರ್ಯಗಳನ್ನು ನಡೆಸಲು ಬೆಂಗಳೂರು, ಮೈಸೂರು ಮುಂತಾದ ಕಡೆಯಿಂದ ಜನರು ಬರುತ್ತಾರೆ.
ಪಿತೃಪಕ್ಷದ ಕೊನೆಯ ದಿನವೇ ಮಹಾಲಯ ಅಮವಾಸ್ಯೆ ಇತರ ದಿನಗಳಲ್ಲಿ ತಮ್ಮ ಪೂರ್ವ ಪಿತೃಗಳಿಗೆ ತರ್ಪಣ ಕೊಡಲು ಆಗದಿದ್ದವರು ಮಹಾಲಯ ಅಮವಾಸ್ಯೆ ದಿನ ತರ್ಪಣ ಸಲ್ಲಿಸಿದರೆ ಅದು ಸ್ವೀಕಾರವಾಗಿ ಪಿತೃಗಳು ತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ ನದಿದಂಡೆಗಳ ಮೇಲೆ ತೇವಾಂಶಭರಿತವಾದ ವಾತಾವರಣ ಇರುವುದರಿಂದ ಆತ್ಮಗಳು ಆಕರ್ಷಿತರಾಗಿ ಬರುತ್ತವೆ ಎಂಬ ನಂಬಿಕೆಯೂ ಇದೆ.
ಪಿತೃಸದ್ಗತಿ ಕಾರ್ಯ ಕೇವಲ ಹಿಂದೂ ಧರ್ಮೀಯರು ಮಾತ್ರವಲ್ಲ ಇತರ ಧರ್ಮೀಯರು ಮಾಡುತ್ತಾರೆ. ಜೈನಧರ್ಮದಲ್ಲಿ ಪಿತೃಗಳ ತಿಥಿಯ ದಿನದಂದು ಜಿನಮಂದಿರಗಳಿಗೆ ಹೋಗಿ ತೀರ್ಥಂಕರರಿಗೆ ನೈವೇದ್ಯವನ್ನು ತೋರಿಸುತ್ತಾರೆ ಮತ್ತು ಪಿತೃಗಳನ್ನು ಸ್ಮರಿಸಿ ಪೂಜೆಯನ್ನು ಮಾಡುತ್ತಾರೆ. ಪಾರ್ಸಿ ಧರ್ಮದಲ್ಲಿ ಮೃತರ ವರ್ಷಾಂತಿಕದಂದು ಮನೆಯಲ್ಲಿ ಸ್ವಚವಾದ ಜಾಗದಲ್ಲಿ ಹಣ್ಣು ಹೂಗಳನ್ನು ಇಡುತ್ತಾರೆ ಮತ್ತು ಮೃತ ವ್ಯಕ್ತಿಯ ತಿಥಿಯ ದಿನದಂದು ಪಾರ್ಸಿ ಗುರುಗಳು ಮಂತ್ರಗಳನ್ನು ಹೇಳುತ್ತಾರೆ.
ಶ್ರೀ ಕ್ಷೇತ್ರ ಜಂಬೂಕೇಶ್ವರ ದೇವಸ್ಥಾನವು ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಅಭಿವೃದ್ಧಿಯಾಗಿದ್ದು,ರಾಜ್ಯ ಮತ್ತು ಪರರಾಜ್ಯಗಳಿಂದಲೂ ಜನರು ಕ್ಷೇತ್ರಕ್ಕೆ ಆಗಮಿಸಿ ಪಿತೃಸದ್ಗತಿ ಮತ್ತುಪ್ರೇತಮೋಕ್ಷಾದಿ ಕಾರ್ಯ ,ಹೋಮ ಹವನಾದಿ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾರೆ.ಶ್ರದ್ದಾಳು ಭಕ್ತರನ್ನು ಆಕರ್ಷಿಸುತ್ತಾ,ದಟ್ಟವಾದ ಪೌರಾಣಿಕ ಹಿನ್ನೆಲೆ ಮತ್ತು ಪವಿತ್ರ ಧಾರ್ಮಿಕ ಅನುಭೂತಿಯೊಂದಿಗೆ ಪ್ರಾಚೀನ ಪರಂಪರೆಯ ದ್ಯೋತಕವಾಗಿ ಬೆಳಗುತ್ತಿದೆ.ಕಂಗೊಳಿಸುತ್ತಿದೆ.
ಉಮಾಕಾಂತ ಖಾರ್ವಿ ಕುಂದಾಪುರ