ಕಬಡ್ಡಿ ಅಪ್ಪಟ ದೇಶೀಯ ಕ್ರೀಡೆ ಚಾಕಚಕ್ಯತೆ, ಧೈರ್ಯ, ಸಾಮೂಹಿಕ ಪ್ರಯತ್ನಶೀಲತೆ ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಕಬಡ್ಡಿಯಲ್ಲಿ ಅಪೂರ್ವ ಸಂದೇಶ ಅನಾವರಣಗೊಳ್ಳುತ್ತದೆ. ಕುಂದಾಪುರದ ಖಾರ್ವಿಕೇರಿಯಲ್ಲಿ ಪ್ರತಿವರ್ಷವೂ ದೀಪಾವಳಿ ಪ್ರಯುಕ್ತ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಕೊಂಕಣಿ ಖಾರ್ವಿ ಸಮಾಜದ ಐಕ್ಯತೆ, ಪರಸ್ಪರ ಭಾಂದವ್ಯ ಬೆಸೆಯುವ ಉದ್ದೇಶವನ್ನಿಟ್ಟುಕೊಂಡು ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ಕಬಡ್ಡಿ ಪಂದ್ಯಾಟವನ್ನು ಏರ್ಪಡಿಸಲಾಗುತ್ತದೆ.
ಕುಂದಾಪುರ ಖಾರ್ವಿಕೇರಿಯಲ್ಲಿ ಕಬಡ್ಡಿ ಪಂದ್ಯಾಟ ಪ್ರಾರಂಭಗೊಂಡ ಕಾರಣಗಳು ಬಹಳ ಕೂತೂಹಲಕಾರಿಯಾಗಿದೆ. ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಾಂಸ್ಕೃತಿಕ ಪರಂಪರೆಯ ಹೋಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಮನರಂಜನೆಗಾಗಿ ನಮ್ಮ ಹಿರಿಯರು ಕಬಡ್ಡಿ ಆಟ ಆಡುತ್ತಿದ್ದರು. ಇದು ಹೋಳಿ ಹಬ್ಬದ ಜನಪದ ಪರಂಪರೆಯ ಆಚರಣೆಗೆ ಪೂರಕವಾಗುವುದಿಲ್ಲವೆಂಬ ನೆಲೆಯಲ್ಲಿ ದೀಪಾವಳಿ ಸಮಯದಲ್ಲಿ ಕಬಡ್ಡಿ ಪಂದ್ಯಾಟ ನಡೆಸಲು ನಾಂದಿ ಹಾಡಲಾಯಿತು.
ಪ್ರಪ್ರಥಮವಾಗಿ ಖಾರ್ವಿಕೆಳಕೇರಿಯ ವೀರಾಂಜನೇಯ ವ್ಯಾಯಾಮ ಶಾಲೆಯ ಜವಹರಲಾಲ್ ಖಾರ್ವಿ ನೇತೃತ್ವದ ತಂಡ ಮತ್ತು ಖಾರ್ವಿ ಮೇಲ್ಕೇರಿಯ ಆಂಜನೇಯ ವ್ಯಾಯಾಮ ಶಾಲೆಯ ಮಕ್ಕಳ ಸೈನ್ಯ ತಂಡದ ನಡುವೆ ಕಬಡ್ಡಿ ಪಂದ್ಯಾಟ ನಡೆಯಿತು. ಇದು ಮುಂದೆ ಖಾರ್ವಿಕೇರಿಯಲ್ಲಿ ದೀಪಾವಳಿಯಂದು ಕಬಡ್ಡಿ ಪಂದ್ಯಾಟ ವರ್ಷಂಪ್ರತಿ ನಡೆಸಲು ಪ್ರೇರಣೆಯಾಯಿತು. ಖಾರ್ವಿ ಮೇಲ್ಕೇರಿಯ ಮಕ್ಕಳ ಸೈನ್ಯ ತಂಡದಲ್ಲಿ ಅಂದು ವಿಠ್ಠಲ ಖಾರ್ವಿ,ಕ್ಯೊತ್ ಕಾರ್ ಗಣಪತಿ ಖಾರ್ವಿ ಮೊದಲಾದವರು ಇದ್ದರು. ಮಹಾಕಾಳಿ ದೇವಸ್ಥಾನ ವಠಾರದಲ್ಲಿ 46 ವರ್ಷಗಳ ಹಿಂದೆ ನಡೆದ ಪ್ರಪ್ರಥಮ ಕಬಡ್ಡಿ ಪಂದ್ಯಾಟ ಮುಂದೆ ಖಾರ್ವಿಕೇರಿ ಪರಿಸರದಲ್ಲಿ ಕ್ರೀಡಾಕ್ರಿಯಾಶೀಲತೆಗೆ ಹೊಸ ಹುರುಪು ತಂದುಕೊಟ್ಟಿತ್ತು. ಸಮಾಜದ ಯುವಕರಲ್ಲಿ ಕ್ರೀಡಾ ಮನೋಭಾವ ಉದ್ದೀಪನಗೊಂಡಿತ್ತು. ಹಲವು ಕಬಡ್ಡಿ ತಂಡಗಳು ಹುಟ್ಟಿಕೊಂಡವು. ಕನಕಪುರಂದರ ಕಬಡ್ಡಿ ತಂಡ ರೆಡ್ ರೋಸ್ ಎಂದು ಮರು ನಾಮಾಂಕಿತ ಆದ ಬಳಿಕ ಬಾಲಾಜಿ ಎಂಬ ಹೆಸರಿನಲ್ಲಿ ಸ್ಥಿರ ಹೆಸರಿನಲ್ಲಿ ಮತ್ತೆ ನಾಮಾಂಕಿತವಾಯಿತು. ವೀರಾಂಜನೇಯ ತಂಡ ರಕ್ತೇಶ್ವರಿ ಹೆಸರು ಪಡೆದುಕೊಂಡಿತ್ತು ರೆಡ್ ರೋಸ್ ತಂಡ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಪ್ರತಿವರ್ಷ ದೀಪಾವಳಿ ಕಬಡ್ಡಿ ಪಂದ್ಯಾಟ ನಡೆಸುತ್ತಾ ಬಂತು. ಅದರ ಜೊತೆಗೆ ಬಾಲಾಜಿ ಕಬಡ್ಡಿ ತಂಡ, ರಕ್ತೇಶ್ವರಿ ತಂಡವೂ ಕೂಡಾ ದೀಪಾವಳಿ ಕಬಡ್ಡಿ ಪಂದ್ಯಾಟ ಏರ್ಪಡಿಸುತ್ತಾ ಬಂತು.
ಖಾರ್ವಿಮೇಲ್ಕೇರಿಯ ಮಕ್ಕಳ ಸೈನ್ಯ ತಂಡ ಈಶ್ವರ ಖಾರ್ವಿ, ರಾಮದಾಸ್ ಖಾರ್ವಿ ನೇತೃತ್ವದಲ್ಲಿ ಕಿಂಗ್ ಫಿಶರ್ ಎಂಬ ಹೆಸರಿನಲ್ಲಿ ನಾಮಾಂಕಿತವಾಯಿತು.ಇದೇ ಸಂದರ್ಭದಲ್ಲಿ ಖಾರ್ವಿಕೇರಿಯ ಕಬಡ್ಡಿ ಆಟಗಾರರು ಕಾಲೇಜು ಮಟ್ಟದಲ್ಲಿ ಆಡುವ ಅರ್ಹತೆ ಪಡೆದುಕೊಂಡರು. ಖಾರ್ವಿ ಸಮಾಜದ ಕಬಡ್ಡಿ ಐಕಾನ್ ಗಳು ಎಂದು ಇಂದಿಗೂ ಗುರುತಿಸಲ್ಪಡುವ ರಾಮನಾಥ್ ಸಾರಂಗ, ವೆಂಕಟೇಶ್ ಸಾರಂಗ್, ರವಿ ಟಿ ನಾಯ್ಕ್, ಹರಿಶ್ಚಂದ್ರ ಖಾರ್ವಿ, ವಿಠ್ಠಲ ಸಾರಂಗ, ಕ್ಯೊತ್ಕಾರ್ ಗಣಪತಿ ಮುಂತಾದವರು ಹೊರವಲಯದ ಕಬಡ್ಡಿ ಪಂದ್ಯಾಟಗಳಲ್ಲಿ ತಮ್ಮ ಪಾರಮ್ಯ ಪ್ರದರ್ಶಿಸಿದರು ಕುಂದಾಪುರ ಬಂಟ್ಸ್ ಹಾಸ್ಟೆಲ್ SRS ಹೋಮ್ ನ ಆಶ್ರಯದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾಟಗಳಲ್ಲಿ ಖಾರ್ವಿಕೇರಿಯ ಎರಡು ತಂಡಗಳು ಭಾಗವಹಿಸುತ್ತಿದ್ದವು ಇಲ್ಲಿ ಖಾರ್ವಿಕೇರಿಯ ಕಬಡ್ಡಿ ತಂಡ ಕುಂದಾಪುರ ನಗರ ಪ್ರದೇಶದ ಪ್ರತಿನಿಧಿಗಳೆಂಬಂತೆ ಸಮಸ್ತ ಕ್ರೀಡಾ ಪ್ರೇಕ್ಷಕರು ಖಾರ್ವಿಕೇರಿ ಕಬಡ್ಡಿ ತಂಡಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದರು.
ಖಾರ್ವಿಕೇರಿಯಲ್ಲಿ ಕಳೆದ ನಲವತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದೀಪಾವಳಿ ಕಬಡ್ಡಿ ಪಂದ್ಯಾಟಗಳು ಕೊರಾನಾ ಸಂದರ್ಭದಲ್ಲಿ ಎರಡು ವರ್ಷ ಸ್ಥಗಿತವಾಗಿದ್ದು ಬಿಟ್ಟರೆ ಉಳಿದಂತೆ ನಿರಾಂತಕವಾಗಿ ನಡೆದುಕೊಂಡು ಬಂದಿದೆ. ಬೆಳಕಿನ ಹಬ್ಬ ದೀಪಾವಳಿಗೆ ಖಾರ್ವಿಕೇರಿಯ ಕಬಡ್ಡಿ ಪಂದ್ಯಾಟ ನವನವೀನ ರಂಗು ನೀಡಿದೆ ಕೊಂಕಣಿ ಖಾರ್ವಿ ಸಮಾಜದ ಹಲವಾರು ಕಬಡ್ಡಿ ಪಟುಗಳ ಪ್ರತಿಭೆ ಬೆಳಕಿಗೆ ಬಂದಿದೆ ಕಿಂಗ್ ಫಿಶರ್ ತಂಡದ ಮಾಜಿ ಆಟಗಾರ H N ಚಂದ್ರಶೇಖರ್ ಖಾರ್ವಿಯವರ ಅಭಿಪ್ರಾಯದಂತೆ 25 ವರ್ಷಗಳ ಹಿಂದಿನ ದೀಪಾವಳಿ ಕಬಡ್ಡಿ ಪಂದ್ಯಾಟಕ್ಕೂ ಈಗಿನ ಪಂದ್ಯಾಟಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಕಬಡ್ಡಿ ಪಂದ್ಯಾಟದ ವ್ಯವಸ್ಥೆಗಳು, ಆಯೋಜನಾ ವ್ಯವಸ್ಥೆಗಳು ಸಂಪೂರ್ಣವಾಗಿ ಆಧುನೀಕರಣಗೊಂಡಿದ್ದೆ. ಪ್ರಸ್ತುತ ದೀಪಾವಳಿ ಕಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಿರುವ 7 Rockers ತಂಡ ಕಬಡ್ಡಿ ಪಂದ್ಯಾಟ ವ್ಯವಸ್ಥೆಯನ್ನು PRO ಕಬಡ್ಡಿ ಮಾದರಿಯಲ್ಲಿಯೇ ಆಯೋಜಿಸಿದ್ದು, ಮಳೆ ಬಂದರೂ ಏನೂ ತೊಂದರೆಯಾಗದಂತೆ ಸಂಪೂರ್ಣವಾಗಿ ಕ್ರೀಡಾಂಗಣಕ್ಕೆ ತಗಡಿನ ಮೇಲ್ಚಾವಣಿ ಹಾಕಲಾಗಿದೆ.
ಈ ಹಿಂದೆ ಕುಂದಾಪುರ ಖಾರ್ವಿಕೇರಿಯ ಒಂದೊಂದು ಏರಿಯಾ ವೈಸ್ ಗೆ ಸೀಮಿತಗೊಳಿಸಿ ತಂಡ ಕಟ್ಟಿಕೊಂಡು ಕಬಡ್ಡಿ ಆಡುವ ಸಂಪ್ರದಾಯ ಮಾಯಾವಾಗಿದ್ದು, ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಸಂದೇಶ ಸಾರಲು ಭಿನ್ನ ಭಿನ್ನ ಏರಿಯಾದ ಆಟಗಾರರನ್ನು ಒಂದೇ ತಂಡವಾಗಿ ಏಕೀಕೃತ ವ್ಯವಸ್ಥೆಯಡಿಯಲ್ಲಿ ಆಡಿಸುವ ಸೌಹಾರ್ದತೆಯ ಪರಂಪರೆ ಮೂಡಿ ಬಂದಿದೆ. ಇದೊಂದು ಒಳ್ಳೆಯ ಬೆಳವಣಿಗೆ.
ಖಾರ್ವಿಕೇರಿ ಪ್ರದೇಶದ ಮಟ್ಟದಲ್ಲಿ ಆಡುತ್ತಿರುವ ಕೊಂಕಣಿ ಖಾರ್ವಿ ಸಮಾಜದ ಕಬಡ್ಡಿ ಆಟಗಾರರು ರಾಜ್ಯ ಮಟ್ಟದಲ್ಲಿ,ರಾಷ್ಟ್ರೀಯ ಮಟ್ಟದಲ್ಲಿ , ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂದು ಹೇಳುವ H N ಚಂದ್ರಶೇಖರ್ ಖಾರ್ವಿಯವರು ಅದಕ್ಕೆ ಸೂಕ್ತ ಕೋಚಿಂಗ್ ಮಾರ್ಗದರ್ಶನ ಮತ್ತು ಸಮಾಜದ ಬೆಂಬಲ ಅವಶ್ಯಕ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಕೊಂಕಣಿ ಖಾರ್ವಿ ಸಮಾಜದ ಪ್ರತಿಭೆಗಳು ಇಂದು ಮಿಂಚುತ್ತಿದ್ದಾರೆ. ಅದರಂತೆ ಕ್ರೀಡಾಕ್ಷೇತ್ರದಲ್ಲೂ ನಮ್ಮ ಪ್ರತಿಭೆಗಳು ಮಿಂಚಬೇಕು ಎಂಬುದು ಮನದಾಳದ ಶುಭ ಹಾರೈಕೆಗಳು. ಇದನ್ನು ಸಾಧಿಸಲು ಅಖಿಲ ಭಾರತ ಮಟ್ಟದಲ್ಲಿ ನಮ್ಮ ಸಮಾಜದ ಕೇಂದ್ರಿಕೃತ ವ್ಯವಸ್ಥೆ ಜಾರಿಗೆ ಬರಬೇಕು, ಅದರ ಮೂಲಕ ನಮ್ಮ ಸಮಾಜದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಕಾರ್ಯೋನ್ಮುಖವಾಗಬೇಕು. ನಮ್ಮ ಸಮಾಜದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ದಿನಕೊಬ್ಬರಂತೆ ನಮ್ಮ ಸಮಾಜದ ಕ್ರೀಡಾ ಪ್ರತಿಭೆಗಳು ಮುನ್ನಲೆಗೆ ಬರುತ್ತಿದ್ದಾರೆ ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಮತ್ತು ಪ್ರೋತ್ಸಾಹದ ಕೊರತೆ ಇದೆ ಆ ಕಾರಣಕ್ಕಾಗೀಯೇ ಈ ಪ್ರತಿಭೆಗಳು ಅವಕಾಶ ವಂಚಿತರಾಗಿ ಕ್ರೀಡಾಲೋಕದಿಂದ ವಿಮುಖರಾಗಿ ತಮ್ಮ ಹೊಟ್ಟೆಪಾಡಿನ ಕುಲಕಸುಬಿನಲ್ಲಿ ತೊಡಗಿಸಿಕೊಂಡಿದ್ದಾರೆ ಹೀಗಾಗದಂತೆ ತಡೆಯಲು ಖಾರ್ವಿ ಆನ್ಲೈನ್ ಮಂಗಳೂರಿನಿಂದ ಮುಂಬೈ ತನಕವೂ ನಮ್ಮ ಸಮಾಜದ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮುನ್ನಲೆಗೆ ತರಲು ಕೇಂದ್ರೀಕೃತ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಸಂಕಲ್ಪ ತೊಟ್ಟಿದೆ.
ಕುಂದಾಪುರ ಖಾರ್ವಿಕೇರಿಯ ದೀಪಾವಳಿ ಕಬಡ್ಡಿ ಪಂದ್ಯಾಟದ ನಿರಂತರವಾದ ಐತಿಹಾಸಿಕ ಸಂಭ್ರಮಕ್ಕೆ ಮೆರುಗು ತಂದುಕೊಟ್ಟ ಕುಂದಾಪುರ ಖಾರ್ವಿಕೇರಿಯ ಬಾಲಾಜಿ ಪ್ರೆಂಡ್, ರಕ್ತೇಶ್ವರಿ ಪ್ರೆಂಡ್ಸ್, ಕಿಂಗ್ ಫಿಶರ್, ವಿದ್ಯಾರಂಗ ಮಿತ್ರ ಮಂಡಳಿ, ಮದ್ದುಗುಡ್ಡೆ ಪ್ರೆಂಡ್ಸ್, ನಾಗಜಟ್ಟಿಗೇಶ್ವರ, ಪ್ರೆಂಡ್ಸ್ ಗ್ರೂಪ್, ಕೆ ಕೆ ಪ್ರೆಂಡ್ಸ್, 7 Rockers ಮುಂತಾದ ತಂಡಗಳಿಗೆ ಧನ್ಯವಾದಗಳು.ಇವರೆಲ್ಲರ ಕ್ರೀಡಾ ಪ್ರೇಮ, ಪ್ರೋತ್ಸಾಹ, ಪರಿಶ್ರಮದ ಫಲವಾಗಿ ಖಾರ್ವಿಕೇರಿಯ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.
ಕುಂದಾಪುರ ಖಾರ್ವಿಕೇರಿಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ದೀಪಾವಳಿ ಪ್ರಯುಕ್ತ ನಡೆಯುವ ಕಬಡ್ಡಿ ಪಂದ್ಯಾಟದ ಸಂಭ್ರಮ ಕಳೆಗಟ್ಟಿದ್ದೆ. ಕುಂದಾಪುರದ ಎಲ್ಲಾ ದಾರಿಗಳು ಖಾರ್ವಿಕೇರಿಯತ್ತ ಸಾಗುತ್ತಿದೆ. ಸಮಸ್ತ ಕುಂದಾಪುರ ತಾಲೂಕಿನ ಜನತೆ ಖಾರ್ವಿಕೇರಿಯಲ್ಲಿ ನಡೆಯುವ ಕಬಡ್ಡಿ ಪಂದ್ಯಾಟ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಮುಂಬೈಯಿಂದ ಮಂಗಳೂರು ತನಕದ ಸಮಾಜದ ಕಬಡ್ಡಿ ತಂಡಗಳು, ಸಮಾಜ ಭಾಂಧವರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ಬಾಂಧವರನ್ನು ಬೆಸೆಯುವ, ಪರಸ್ಪರ ಸೌಹಾರ್ದತೆ, ಐಕ್ಯತೆಯನ್ನು ಮೂಡಿಸುವ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕಬಡ್ಡಿಯ ಮೂಲಕ ಭಾಂದವ್ಯ ಬೆಸುಗೆಯ ಮಹೋನ್ನತ ಕಾರ್ಯಕ್ರಮ ಈ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವ ಕೊಂಕಣಿ ಖಾರ್ವಿ ಸಮಾಜದ ಎಲ್ಲಾ ಕಬಡ್ಡಿ ತಂಡಗಳಿಗೂ ಶುಭ ಹಾರೈಕೆಗಳು. ಸಮಸ್ತ ಸಮಾಜ ಭಾಂಧವರಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಬೆಳಕಿನ ಹಬ್ಬ ತಮ್ಮೆಲ್ಲರ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಉಂಟು ಮಾಡಲಿ ಎಂದು ಶುಭ ಹಾರೈಸುತ್ತೇನೆ.
ಸುಧಾಕರ್ ಖಾರ್ವಿ
Editor
www.kharvionline.com