ಕುಂದಾಪುರದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ಕುಂದಾಪುರ ಅಂದ ಕೂಡಲೇ ಮೊದಲು ನೆನಪಾಗುವುದು ಕುಂದೇಶ್ವರ ದೇವಸ್ಥಾನ ಕಾಲಗರ್ಭದಲ್ಲಿ ದೈದೀಪ್ಯಮಾನವಾಗಿ ಪ್ರಜ್ವಲಿಸುತ್ತಿರುವ ಕುಂದಾಪುರದ ಇತಿಹಾಸದ ಐತಿಹ್ಯಗಳ ಪ್ರಕಾರ ಶ್ರೀ ಕುಂದೇಶ್ವರ ದೇಗುಲ ಕುಂದಾಪುರ ಎನ್ನುವ ಊರಿನ ಉಗಮಕ್ಕೆ ಕಾರಣವಾಯಿತೆನ್ನಬಹುದು ಕ್ರಿ.ಶ.1262 ಕ್ಕೆ ಸಲ್ಲುವ ಆಳುಪ ರಾಜನಾದ ವೀರಪಾಂಡ್ಯನ ಶಾಸನಗಳಲ್ಲಿ ಈ ಕುರಿತು ಹಲವಾರು ವಿಷಯಗಳು ಪ್ರಸ್ತಾಪಿಸಲ್ಪಟ್ಟಿದೆ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ.

ದಕ್ಷಿಣ ಕನ್ನಡ ಗಜೆಟ್ ನಲ್ಲಿ ಉಲ್ಲೇಖವಾದಂತೆ ಪಂಚಗಂಗಾವಳಿ ನದಿ ತೀರದ ರಾಜ ಕುಂದವರ್ಮನು ನಿರ್ಮಿಸಿದಂತಹ ಕುಂದೇಶ್ವರ ದೇವಾಲಯದಿಂದ ಈ ಊರಿಗೆ ಕುಂದಾಪುರ ಎನ್ನುವ ಹೆಸರು ಬಂದಿದೆ ಕುಂದೇಶ್ವರ ದೇವಸ್ಥಾನವು ಸುಮಾರು 11 ರಿಂದ 12 ನೇ ಶತಮಾನದಷ್ಟು ಪ್ರಾಚೀನವೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಶ್ರೀ ಕುಂದೇಶ್ವರ ರಾಜ ಕುಂದವರ್ಮನ ಮನೆದೇವರಾಗಿತ್ತು ರಾಜನಿಗೆ ಶಿವ ಕನಸಿನಲ್ಲಿ ಕಾಣಿಸಿಕೊಂಡು ದೇವಸ್ಥಾನ ನಿರ್ಮಿಸುವಂತೆ ನೀಡಿದ ಸೂಚನೆಯ ಪ್ರಕಾರ ಶ್ರೀ ಕುಂದೇಶ್ವರ ದೇಗುಲ ನಿರ್ಮಾಣವಾಯಿತು.ಮಹಾ ಶಿವಭಕ್ತನಾದ ಕುಂದವರ್ಮ ದೇವಸ್ಥಾನದಲ್ಲಿ ಪೂಜಾಕೈಂಕರ್ಯಗಳ ಸಹಿತ ಕಾಲಕಾಲಕ್ಕೆ ದೀಪೋತ್ಸವ , ಶಿವರಾತ್ರಿ ಇತ್ಯಾದಿ ಉತ್ಸವಗಳನ್ನು ಬಲು ವಿಜೃಂಭಣೆಯಿಂದ ನಡೆಸುತ್ತಿದ್ದನು ತದ ನಂತರ ಪೋರ್ಚುಗೀಸರು ಕುಂದಾಪುರ ಕರಾವಳಿಯನ್ನು ಆಕ್ರಮಿಸಿಕೊಂಡರು 1569 ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಪೋರ್ಚುಗೀಸರು ಕರ್ನಾಟಕ ಕರಾವಳಿಯ ಅಧಿಪತ್ಯ ಸ್ಥಾಪಿಸಿದರು ಆಗ ಕೆಳದಿ ಅರಸ ಶಿವಪ್ಪ ನಾಯಕನು ಪೋರ್ಚುಗೀಸರನ್ನು ಧೈರ್ಯದಿಂದ ಎದುರಿಸಿ ಹೋರಾಡಿ ಮುಖ್ಯವಾಗಿ ಬಸ್ರೂರು ಮತ್ತು ಗಂಗೊಳ್ಳಿ ಕರಾವಳಿ ಬಂದರು ಪ್ರದೇಶವನ್ನು ಪೋರ್ಚುಗೀಸರಿಂದ ಬಂಧಮುಕ್ತಗೊಳಿಸಿದನು.

ಹೀಗೆ ಪೋರ್ಚುಗೀಸರ ದಬ್ಬಾಳಿಕೆಯನ್ನು ಮೆಟ್ಟಿ ನಿಂತ ಕೆಳದಿ ಅರಸ ಶಿವಪ್ಪ ನಾಯಕನ ಶೌರ್ಯ ಪರಾಕ್ರಮಗಳು ಕುಂದಾಪುರದ ಇತಿಹಾಸದಲ್ಲಿ ಅಜರಾಮರ ಶಿವಪ್ಪ ನಾಯಕ ತನ್ನ ಅಧಿಕಾರಾವಧಿಯಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ದಾನದತ್ತಿ ನೀಡುತ್ತಿದ್ದ ಬಗ್ಗೆ ಉಲ್ಲೇಖವಿದೆ ಆಗಮ ಶಾಸ್ತ್ರಕ್ಕೆ ಒಳಪಡದ ಶ್ರೀ ಕುಂದೇಶ್ವರ ದೇವಸ್ಥಾನ ಏಕ ಗರ್ಭಗುಡಿಯ ಸುಂದರ ದೇಗುಲ.ಕರಿಶಿಲೆಯ ಲಿಂಗ ನಾಲ್ಕು ಅಡಿಯಿದ್ದು ಲಿಂಗದ ಮೂರನೇ ಒಂದರಷ್ಟು ಅಂಶಗಳು ಮಾತ್ರ ಕಣ್ಣಿಗೆ ಗೋಚರಿಸುತ್ತದೆ ಸಣ್ಣದಾದ ಗರ್ಭಗುಡಿಯ ಒಳಗಡೆ ನೆಲಕ್ಕೆ ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಡಗೊಳಿಸಲಾಗಿದೆ ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತನೆ ಮಾಡಲ್ಪಟ್ಟ ಕಲ್ಲಿನ ದೊಡ್ಡ ಪಾಣಿ ಪೀಠವಿದೆ.ತೀರ್ಥ ಸುಲಭವಾಗಿ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವು ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂರ್ತಿಯನ್ನು ಇದು ಹೊಂದಿದೆ.ಭವ್ಯತೆಯ ಮೆರುಗು ಹೊಂದಿರುವ ದೊಡ್ಡ ಪಾಣಿಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠಾಪನೆ ಮಾಡಲಾಗಿದೆ.ಇದೊಂದು ಅಪೂರ್ವವಾದ ಮತ್ತು ಅದ್ಭುತವಾದ ಶಿವಲಿಂಗವಾಗಿದೆ. ಶ್ರೀ ಕುಂದೇಶ್ವರ ದೇಗುಲದ ಎಡಪ್ವಾರ್ಶ್ವದಲ್ಲಿ ವೈಜ್ಞಾನಿಕವಾಗಿ ಸ್ವಚ್ಛಗೊಳಿಸಿ ಭದ್ರವಾಗಿ ಹುಗಿದು ಸ್ಥಾಪಿಸಲಾದ ಪ್ರಾಚೀನ ಶಾಸನಗಳು ಕುಂದಾಪುರ ಮತ್ತು ಕುಂದೇಶ್ವರ ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಸಾರುತ್ತವೆ.ಈ ದೇಗುಲಕ್ಕೆ ಕರ್ನಾಟಕದ ಅನೇಕ ರಾಜ ಮನೆತನದವರು ಬಿಟ್ಟ ಉಂಬಳಿ ಉತ್ತಾರಗಳು,ದಾನಧರ್ಮಗಳು,ಶೃಂಗೇರಿ ಪೀಠಕ್ಕೂ ಕುಂದೇಶ್ವರ ದೇವಸ್ಥಾನಕ್ಕೂ ಇದ್ದ ಸಂಬಂಧ ಇವೆಲ್ಲ ಈ ನಾಲ್ಕು ಶಾಸನಗಳಲ್ಲಿ ಉಲ್ಲೇಖಗೊಂಡಿವೆ.

ಶ್ರೀ ಕುಂದೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವಕ್ಕೆ ಶತಶತಮಾನಗಳ ಇತಿಹಾಸವಿದೆ. ಹನ್ನೊಂದನೇ ಶತಮಾನದ ಮಧ್ಯಭಾಗದಲ್ಲಿ ಕುಂದವರ್ಮನಿಂದ ವೈಭವಪೂರ್ಣವಾಗಿ ನಡೆಸಿಕೊಂಡು ಬಂದ ಶ್ರೀ ಕುಂದೇಶ್ವರ ದೀಪೋತ್ಸವವು ಹೈದರಾಲಿ ಟಿಪ್ಪು ಸುಲ್ತಾನ್ ಕಾಲದಲ್ಲೂ ಪ್ರಜ್ವಲಿಸಲ್ಪಟ್ಟು,ಬ್ರಿಟಿಷ್ ಕಾಲದಲ್ಲೂ ವೈಭವಪೂರ್ಣವಾಗಿ ಆಚರಿಸಲ್ಪಡುತ್ತಿತ್ತು.ಅಂದಿನಿಂದ ಇಂದಿನವರೆಗೂ ಶ್ರೀ ಕುಂದೇಶ್ವರ ದೇಗುಲದ ದೀಪೋತ್ಸವವು ಪರಶಿವನ ಪರಮಾನುಗ್ರಹದಿಂದ ವೈಭವಪೂರ್ಣವಾಗಿ ನೇರವೇರುತ್ತಾ ಬಂದಿದೆ ದೀಪೋತ್ಸವದ ದಿನ ಬೆಳಿಗ್ಗೆ ಶಿವನಿಗೆ ಶತರುದ್ರಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆದು ಮಹಾಸಂತರ್ಪಣೆ ಜರುಗುತ್ತದೆ. ದೇಗುಲದಲ್ಲಿ ಅಂದು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ವಿವಿಧ ಭಜನಾ ಮಂಡಳಿಯವರಿಂದ ವಿಶೇಷ ಭಜನಾ ಕಾರ್ಯಕ್ರಮ ನೇರವೇರುತ್ತದೆ. ರಾತ್ರಿ ರಂಗಪೂಜೆ ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ.ಈ ಸಂದರ್ಭದಲ್ಲಿ ರಥೋತ್ಸವದ ಮಾದರಿಯಲ್ಲಿ ಹಳಗ ಜಾಗಂಟೆ ನಿನಾದಗಳು ಮೊಳಗುತ್ತದೆ ದೇಗುಲದ ಒಳಸುತ್ತು ಮತ್ತು ಹೊರಸುತ್ತುಗಳಲ್ಲಿ ಬಲಿಗಲ್ಲುಗಳಲ್ಲಿ ಬಲಿಸೇವೆ ನಡೆದ ಬಳಿಕ ಶ್ರೀ ದೇವರ ಪುರ ಮೆರವಣಿಗೆಗೆ ಚಾಲನೆ ದೊರಕುತ್ತದೆ. ದೇಗುಲದಿಂದ ಆರಂಭವಾದ ಮೆರವಣಿಗೆ ಪಾರಿಜಾತ ಸರ್ಕಲ್, ಹಳೆಬಸ್ ಸ್ಟ್ಯಾಂಡ್ ಮಾರ್ಗವಾಗಿ ಹೊಸ ಬಸ್ ಸ್ಟ್ಯಾಂಡ್ ಬಳಿ ತಿರುಗಿ ಪುರಸಭಾ ರಸ್ತೆ ಮಾರ್ಗವಾಗಿ ಹಂಗಳೂರು ಗೆಳೆಯರ ಬಳಗದ ತನಕ ಕ್ರಮಿಸಿ ಮರಳಿ ದೇಗುಲ ಪ್ರವೇಶಿಸುತ್ತದೆ ಶ್ರೀ ದೇವರ ಪುರ ಮೆರವಣಿಗೆ ರಾತ್ರಿ ಆರಂಭವಾದರೆ ದೇಗುಲಕ್ಕೆ ಮರಳಿ ಬರುವಾಗ ಬೆಳಿಗ್ಗಿನ ಜಾವ ಆಗುತ್ತದೆ ಇಷ್ಟೊಂದು ಸುಧೀರ್ಘಾವಧಿಯ ಮಹಾ ಉತ್ಸವ ಕುಂದಾಪುರದಲ್ಲಿ ಎಲ್ಲೂ ಇಲ್ಲ. ಈ ವೈಭವದ ಪುರ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬೆಂಕಿಆಟ, ನಾಗಸ್ವರ ವಾದನ, ನಾಸಿಕ್ ಬ್ಯಾಂಡ್, ತಟ್ಟೀರಾಯ, ವಿವಿಧ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳ ಸೊಬಗು ಚಿತ್ತಾರ ಸಂಭ್ರಮಗಳು ಆಕರ್ಷಕವಾಗಿ ಅನಾವರಣಗೊಳ್ಳುತ್ತದೆ.

ಭಕ್ತಾದಿಗಳು ಉತ್ಸವ ಸಾಗುವ ಮಾರ್ಗದಲ್ಲಿ ಆಕರ್ಷಕ ವೇದಿಕೆಗಳನ್ನು ನಿರ್ಮಿಸಿ ಶ್ರೀ ದೇವರನ್ನು ಆಹ್ವಾನಿಸಿ ಕಟ್ಟೆಪೂಜೆ ನೇರವೇರಿಸುತ್ತಾರೆ. ಸುಮಾರು 16 ಕಡೆ ಕಟ್ಟೆಪೂಜೆ ನೇರವೇರುತ್ತದೆ. ಅಂದು ಕುಂದಾಪುರ ನಗರವಿಡೀ ನಿದ್ರಿಸುವುದಿಲ್ಲ.ಇಡೀ ಕುಂದಾಪುರದ ಜನರು ಈ ಮಹಾ ಉತ್ಸವದಲ್ಲಿ ಸಂಭ್ರಮ ಸಡಗರದಿಂದ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿವಿಧ ಸಂಘ ಸಂಸ್ಥೆಗಳು ಶಾಸ್ತ್ರಿ ಪಾರ್ಕ ನಿಂದ ಹಿಡಿದು ಪಾರಿಜಾತ ಸರ್ಕಲ್, ಹಳೆಬಸ್ ನಿಲ್ದಾಣ, ಹೊಸಬಸ್ ನಿಲ್ದಾಣ ಹೀಗೆ ಕುಂದಾಪುರ ನಗರದ ಏಲ್ಲೆಡೆಯಲ್ಲೂ ವೇದಿಕೆಯನ್ನು ನಿರ್ಮಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ದೀಪೋತ್ಸವಕ್ಕೆ ಮೆರುಗು ತಂದುಕೊಡುತ್ತಾರೆ. ಇಡೀ ಕುಂದಾಪುರ ಪರಿಸರವೇ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಶೋಭಾಯಮಾನವಾಗಿ ಪ್ರಜ್ವಲಿಸುತ್ತದೆ. ಬೆಳಕಿನಾಟದ ರಂಗವೈಭವ ಅಲ್ಲಿ ಸಾಕ್ಷಾತ್ಕಾರಗೊಳ್ಳುತ್ತದೆ. ದೀಪೋತ್ಸವದ ಸಂಜೆ ದೇಗುಲದಲ್ಲಿ ಲಕ್ಷ ದೀಪೋತ್ಸವ ಜರುಗುತ್ತದೆ. ಸಹಸ್ರಾರು ಭಕ್ತರು ಹಣತೆಯ ದೀಪವನ್ನು ಹಚ್ಚಿ ಕುಂದೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಇತಿಹಾಸ ಪ್ರಸಿದ್ಧ ಕುಂದೇಶ್ವರ ಕೆರೆಯಲ್ಲಿ ದೀಪೋತ್ಸವ ದಿನದಂದು ತೆಪ್ಪೋತ್ಸವ ಜರುಗುತ್ತದೆ.ಶ್ರೀ ದೇವರ ಜಲವಿಹಾರ ಕಾರ್ಯ ನಡೆಯುವಾಗ ಇಡೀ ಕೆರೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸುತ್ತಾರೆ.ಜೊತೆಗೆ ಕೆರೆಯ ಸುತ್ತಲೂ ಭಕ್ತಾದಿಗಳು ಹಚ್ಚುವ ಹಣತೆಯ ದೀಪದ ಬೆಳಕು ಕೆರೆಯ ನೀರಿನಲ್ಲಿ ಪ್ರತಿಫಲನಗೊಂಡು ಬೆಳಕಿನ ಲೋಕವನ್ನೇ ಸೃಷ್ಟಿಸುತ್ತದೆ. ಈ ಕೆರೆಯ ಮಧ್ಯಭಾಗದಲ್ಲಿ ನಿರ್ಮಿಸಲ್ಪಟ್ಟ ಆಕರ್ಷಕ ಶಿವನ ಮೂರ್ತಿಯನ್ನು ಅಂದು ವಿಶೇಷ ಬೆಳಕಿನ ಮೂಲಕ ಪ್ರಜ್ವಲಿಸುತ್ತಾರೆ.ಬೆಳಕಿನಾಟದ ವೈಭವದಿಂದ ಶಿವನ ಮೂರ್ತಿಯ ಸೌಂದರ್ಯ ಇಮ್ಮಡಿಯಾಗುತ್ತದೆ.ಈ ಶಿವನ ಮೂರ್ತಿಯನ್ನು ಶಿವಮೊಗ್ಗದ ಖ್ಯಾತ ಶಿಲ್ಪಿ ಶ್ರೀ ನಾರಾಯಣ ರಾವ್ ನಿರ್ಮಿಸಿದ್ದು ಇವರು ಹಂಗಳೂರಿನ ಅಂಜನೇಯ ಮೂರ್ತಿ ಮತ್ತು ಮುರುಡೇಶ್ವರದ ವಿಶ್ವ ವಿಖ್ಯಾತ ಶಿವನ ಮೂರ್ತಿಯನ್ನು ಕೂಡಾ ನಿರ್ಮಾಣ ಮಾಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇಡೀ ಊರಿಗೆ ಊರೇ ಪಾಲ್ಗೊಂಡು ಭಕ್ತಿಭಾವಗಳ ಮಧುರ ಅನುಭೂತಿಯಲ್ಲಿ ಸಂಭ್ರಮಿಸುವ ಶ್ರೀ ಕುಂದೇಶ್ವರ ದೀಪೋತ್ಸವ ಇಡೀ ಕರ್ನಾಟಕದಲ್ಲಿಯೇ ಅಭೂತಪೂರ್ವ ಮಹಾಉತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ ಈ ಮಾಸದಲ್ಲಿ ಭಗವಂತನಿಗೆ ದೀಪ ಬೆಳಗಿದರೆ ಮನುಷ್ಯನ ಸಕಲ ಪಾಪಗಳೆಲ್ಲ ಪರಿಹಾರವಾಗಿ ಪುಣ್ಯಫಲ ಸಂಚಯವಾಗುತ್ತದೆ ಎಂಬ ಅಚಲವಾದ ನಂಬಿಕೆಯಿದೆ.ಅದರಲ್ಲೂ ಶಿವಾಲಯದಲ್ಲಿ ದೀಪ ಹಚ್ಚಿದರೆ ಮೋಕ್ಷ ದೊರಕುತ್ತದೆ ಎಂದು ವಶಿಷ್ಠ ಮುನಿಗಳು ಕಾರ್ತಿಕ ಮಾಸ ಮಹಾತ್ಮೆಯ ನಾಲ್ಕನೇ ಅಧ್ಯಾಯದಲ್ಲಿ ಪ್ರಸ್ತುತ ಪಡಿಸಿರುತ್ತಾರೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡಿದರೆ ಆಯುರಾರೋಗ್ಯ ಪ್ರಾಪ್ತಿಯಾಗುತ್ತದೆ ಕತ್ತಿನವರೆಗೂ ನೀರಿನಲ್ಲಿ ಮುಳುಗಿ ಸ್ನಾನ ಮಾಡಿದರೆ ಉದರ ಸಂಬಂಧ ವ್ಯಾಧಿಗಳು ವಾಸಿಯಾಗುತ್ತದೆ ಎಂಬ ನಂಬಿಕೆಯೂ ಇದೆ ಇದು ವೈಜ್ಞಾನಿಕವಾಗಿಯೂ ನಿರೂಪಿತಗೊಂಡಿದ್ದು ಮಳೆಗಾಲದಲ್ಲಿ ಬಿದ್ದ ನೀರನ್ನು ಭೂಮಿ ಹೀರಿಕೊಂಡ ಪರಿಣಾಮವಾಗಿ ಬಲವಾದ ಆಯಸ್ಕಾಂತ ಮಂಡಲ ಉಂಟಾಗುತ್ತದೆ ಮಳೆಗಾಲದ ಬಳಿಕ ಬರುವ ಕಾರ್ತಿಕ ಮಾಸದಲ್ಲಿಭೂಮಿಯ ನೀರಿನಲ್ಲಿ ಆಯಸ್ಕಾಂತ ಶಕ್ತಿ ಅತ್ಯಧಿಕವಾಗಿರುತ್ತದೆ ಅದು ಪ್ರಾತಃಕಾಲದಲ್ಲಿ ವಿಶೇಷ ಪ್ರಭಾವಶಾಲಿಯಾಗಿರುವುದರಿಂದ ಕಾರ್ತಿಕ ಮಾಸದ ಪ್ರಾತಃಕಾಲದ ಸ್ನಾನ ಮನುಷ್ಯನಿಗೆ ಶುಭಕರ ಮತ್ತು ಆರೋಗ್ಯಕರ ಫಲವನ್ನು ನೀಡುತ್ತದೆ ಈ ಮಾಸದಲ್ಲಿ ದೀಪಾರಾಧನೆ ಪವಿತ್ರವಾಗಿದ್ದು, ಸೂಕ್ಷ್ಮಜೀವಿಗಳು, ಪ್ರಾಣಿ ಪಕ್ಷಿಗಳ ಸಹಿತ ಅನೇಕ ಜೀವವೈವಿಧ್ಯಗಳು ಕಾರ್ತಿಕ ದೀಪವನ್ನು ನೋಡಿ ಧನ್ಯವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿದೆ.

ನೀವು ಗಮನಿಸಿರಬಹುದು.ಕಾರ್ತಿಕ ಮಾಸದಲ್ಲಿ ಅನೇಕ ಮಂದಿ ಪ್ರಾತಃಕಾಲದಲ್ಲಿ ಮಿಂದು ಶುಚಿರ್ಭೂತರಾಗಿ ಶ್ರೀ ಕುಂದೇಶ್ವರ ದೇಗುಲಕ್ಕೆ ಬಂದು ಕುಂದೇಶ್ವರನ ದರ್ಶನ ಪಡೆಯುತ್ತಾರೆ ದೀಪಾರಾಧನೆಗೆ ಭಾರತೀಯ ಸಂಸ್ಕೃತಿಯಲ್ಲಿ ಬಹು ಪ್ರಾಮುಖ್ಯತೆ ಇದೆ ಬೆಳಕು ಭಗವಂತನ ಸ್ವರೂಪ ಬೆಳಕು ಎಂದರೆ ಬರಿಯ ಪ್ರಕಾಶ ಎಂದರ್ಥವಲ್ಲ ಬೆಳಕು ಎಂದರೆ ಜ್ಞಾನ ಬೆಳಕು ಎಂದರೆ ಚೈತನ್ಯ ಹಣತೆಯಲ್ಲಿ ದೀಪ ಹಚ್ಚಿದಾಗ ಆ ರೂಪವು ಭಗವಂತನಂತೆ ವಿಶ್ವತೋಮುಖವಾಗಿರುತ್ತದೆ ದೀಪದ ಬೆಳಕಿನಲ್ಲಿ ದೇವರ ದರ್ಶನ ಆನಂದಕರವಾಗಿರುತ್ತದೆ ಶ್ರೀ ರಾಮಕೃಷ್ಣ ಪರಮಹಂಸರು ದೀಪ ಜ್ಯೋತಿಯಲ್ಲಿ ಮಹಾಲಕ್ಷ್ಮಿ,ಮಹಾಸರಸ್ವತಿ, ಮಹಾಕಾಳಿಯನ್ನು ಕಾಣುತ್ತಿದ್ದರು ದೀಪದ ಬತ್ತಿಯ ತುತ್ತತುದಿಯಲ್ಲಿನ ನೀಲಕಾಂತಿಯೇ ಮಹಾಕಾಳಿ, ಬೆಳ್ಳನೆಯ ಕಾಂತಿಯೇ ಸರಸ್ವತಿ ಮತ್ತು ಕೆಂಪು ಕಾಂತಿಯೇ ಮಹಾಲಕ್ಷ್ಮಿ ಎಂದು ಹೇಳುತ್ತಿದ್ದರಂತೆ ಕೇರಳದಲ್ಲಿ ದೀಪ ಸಾಕ್ಷಿಯಾಗಿ ಹಿಂದೂ ವಿವಾಹಗಳು ನೇರವೇರುತ್ತದೆ ಅಲ್ಲಿ ದೀಪ ಪರಬ್ರಹ್ಮ ಸ್ವರೂಪವೆಂದು ನಂಬುತ್ತಾರೆ ಕೇರಳದ ವಡನಪಳ್ಳಿ ಊರು ದೀಪಾರಾಧನೆಗೆ ಬಲು ಪ್ರಸಿದ್ದವಾಗಿದೆ ಇಲ್ಲಿನ ಶ್ರೀ ದುರ್ಗಾದೇವಿ ದೇಗುಲದಲ್ಲಿ ಪ್ರತಿನಿತ್ಯ ದೀಪೋತ್ಸವ ಇಲ್ಲಿನ ಜನರು ಬ್ರಾಹ್ಮಿಮೂಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ದುರ್ಗಾದೇವಿ ದೇಗುಲದಲ್ಲಿ ದೀಪ ಹಚ್ಚಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ ಇಲ್ಲಿನ ಪರಧರ್ಮೀಯರೂ ಕೂಡಾ ಈ ದೀಪರಾಧನೆಯ ಪುಣ್ಯ ಕಾರ್ಯದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಪಂಚಗಂಗಾವಳಿಯ ಪುಣ್ಯ ಭೂಮಿಯಾದ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನಡೆಯಲಿದ್ದು ಕುಂದಾಪುರ ನಗರ ಪವಿತ್ರ ಧಾರ್ಮಿಕ ಸಂಭ್ರಮದಲ್ಲಿ ಭಕ್ತಿಪರವಶತೆಯಿಂದ ನಲಿದಾಡುವ ಶುಭಗಳಿಗೆ ಕೂಡಿ ಬಂದಿದೆ 2023 ಡಿಸೆಂಬರ್ 12ರ ಮಂಗಳವಾರ ದಂದು ಕುಂದೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ನಡೆಯಲಿದ್ದು ಭಕ್ತಾಭಿಮಾನಿಗಳೆಲ್ಲರೂ ಈ ಪವಿತ್ರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಕ್ಷಣಗಣನೆ ಆರಂಭವಾಗಿದೆ ದೀಪೋತ್ಸವ ಪರಿಸರದ ನಕರಾತ್ಮಕ ಶಕ್ತಿಗಳನ್ನು ಹೊಡೆದೋಡಿಸಿ ಸಕರಾತ್ಮಕ ಪ್ರಭೆಯನ್ನು ಬೆಳಗಿಸುತ್ತದೆ. ಮನದ ಅಂಧಕಾರವನ್ನು ತೊಲಗಿಸಿ ಜ್ಞಾನ ಜ್ಯೋತಿಯನ್ನು ಉದ್ದೀಪನಗೊಳಿಸುತ್ತದೆ.

ಕುಂದೇಶ್ವರನ ಸನ್ನಿಧಿಯಲ್ಲಿ ಪ್ರತಿ ತಿಂಗಳ ಪ್ರಥಮ ಸೋಮವಾರ ದಾನಿಗಳ ಸಹಕಾರದಿಂದ ಹರಕೆಯ ರೂಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ ಇದರಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸುತ್ತಾರೆ ಕುಂದೇಶ್ವರ ದೇವಸ್ಥಾನವು ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಚಾತ್ರರವರ ಸಮರ್ಥ ನಾಯಕತ್ವ ಮತ್ತು ಸಮಿತಿಯ ಸರ್ವ ಸದಸ್ಯರು, ಅರ್ಚಕ ವೃಂದ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ದೇವಸ್ಥಾನ ಅಭಿವೃದ್ಧಿಯ ನಾಗಾಲೋಟದಲ್ಲಿದೆ ಉತ್ಸವಾದಿ ಸೇವಾಕೈಂಕರ್ಯಗಳು ಬಹಳ ವೈಭವಪೂರ್ಣವಾಗಿ ಜರುಗುತ್ತಿದೆ ಶ್ರೀ ಕುಂದೇಶ್ವರ ಅಪಾರ ಕಾರಣಿಕ ದೇವರಾಗಿದ್ದು ನಂಬಿದ ಭಕ್ತರಿಗೆ ಇಷ್ಟಾರ್ಥ ದಯಪಾಲಿಸುವ ಕರುಣಾಮಯಿಯಾಗಿದ್ದಾನೆ ಪರಶಿವನ ದಿವ್ಯ ಸನ್ನಿಧಿಯಲ್ಲಿ ಕುಂದಾಪುರದ ಮಹಾಉತ್ಸವವಾಗಿ ಕಂಗೊಳಿಸುವ ಲಕ್ಷದೀಪೋತ್ಸವ ಮತ್ತು ರಥೋತ್ಸವದ ಪವಿತ್ರ ಧಾರ್ಮಿಕ ಸಂಭ್ರಮದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಪಾಲ್ಗೊಂಡು ಶ್ರೀ ಕುಂದೇಶ್ವರನ ಪರಮಾನುಗ್ರಹಕ್ಕೆ ಪಾತ್ರರಾಗಬೇಕು ಲಕ್ಷ ದೀಪಗಳ ಪುಣ್ಯಪ್ರಭೆಯನ್ನು ಕಣ್ತುಂಬಿಕೊಂಡು ನಮ್ಮ ಜೀವನದಲ್ಲಿ ಪುಣ್ಯ ಸಂಚಯ ಮಾಡೋಣ ದಿವ್ಯ ಸಾಕಾರ ಮೂರ್ತಿಯಾದ ಶ್ರೀ ಕುಂದೇಶ್ವರನು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಪ್ರಾರ್ಥಸಿಕೊಳ್ಳುತ್ತೇನೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *