ಪಚ್ಚಲೆಯಲ್ಲಿ ಪಡಿಮೂಡಿದ ಸುವರ್ಣಹಾರ ಕಷ್ಟಸಹಿಷ್ಣು ಮೀನುಗಾರರ ಭಕ್ತಿಯ ಸಾಕಾರ

ಪಚ್ಚಲೆ ಅಥವಾ ನೀಲಿಕಲ್ಲುಗಳು ಎಂದು ಕರೆಯಲ್ಪಡುವ ಕಪ್ಪೆಚಿಪ್ಪಿನ ಪ್ರಭೇಧ ಕರಾವಳಿಯವರಿಗೆ ಚಿರಪರಿಚಿತ. ಅತ್ಯಧಿಕ ಪೌಷ್ಟಿಕಾಂಶ ಮತ್ತು ಔಷಧೀಯ ಗುಣವುಳ್ಳ ನೀಲಿಕಲ್ಲುಗಳಿಗೆ ಅಪರಿಮಿತ ಬೇಡಿಕೆ ಇದೆ. ಕೊಂಕಣಿಯಲ್ಲಿ ಇದಕ್ಕೆ ಜಾಬು ಎಂದು ಕರೆಯುತ್ತಾರೆ.

ಸಮುದ್ರದಲ್ಲಿ ಬಂಡೆಗಲ್ಲುಗಳಿಗೆ ಅಂಟಿಕೊಂಡು ಬೆಳೆಯುವ ಈ ನೀಲಿಕಲ್ಲುಗಳನ್ನು ಮುಳುಗಿ ತೆಗೆಯುವ ಸಾಹಸ ಪ್ರವೃತ್ತಿಯ ಕಾಯಕದಲ್ಲಿ ಬದುಕು ಕಂಡುಕೊಂಡಿರುವ ಮೀನುಗಾರರು ಗಂಗೊಳ್ಳಿಯಲ್ಲಿ ಇದ್ದಾರೆ. ವಿನಾಶದ ಅಂಚಿನಲ್ಲಿದ್ದ ನೀಲಿಕಲ್ಲುಗಳು ಕಳೆದ ಮಳೆಗಾಲದ ನಂತರದ ಪ್ರಕೃತಿಯ ವಿಸ್ಮಯಕಾರಿ ಬೆಳವಣಿಗೆಯ ಪುನಶ್ಚೇತನವೆಂಬಂತೆ ಕರಾವಳಿಯೂದ್ದಕ್ಕೂ ಸಮೃದ್ಧವಾಗಿ ಸಿಗುತ್ತದೆ. ಆಶ್ಚರ್ಯವೆಂದರೆ ಸಮುದ್ರ ಮಾತ್ರವಲ್ಲ ನದಿಪಾತ್ರಗಳಲ್ಲೂ ನೀಲಿಕಲ್ಲುಗಳು ಭರಪೂರ ವೃದ್ಧಿಯಾಗಿರುವುದು ಮೀನುಗಾರರ ಮತ್ತು ಪರಿಸರ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

ಈ ಕಷ್ಟಸಹಿಷ್ಣು ಮೀನುಗಾರರಿಗೆ ನೀಲಿಕಲ್ಲುಗಳ ಸಮೃದ್ಧತೆಯಿಂದ ದುಡಿಮೆಗೆ ತೃಪ್ತಿಕರವಾದ ಪ್ರತಿಫಲ ದೊರಕಿದೆ. ಪ್ರಕೃತಿಯ ಈ ಜಲಚರ ಸಮೃದ್ಧತೆಯ ಪುನಶ್ಚೇತನಕ್ಕೆ ಮೂಲಪ್ರೇರಣೆ ಮತ್ತು ಕಾರಣೀಕರ್ತೆ ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಿಯೆಂದು ಮೀನುಗಾರರು ದೃಡವಾಗಿ ನಂಬಿದ್ದಾರೆ. ಜಗನ್ಮಾತೆಯಾದ ಶ್ರೀ ಮಹಾಕಾಳಿ ಅಮ್ಮನವರ ಪರಮಾನುಗ್ರಹದಿಂದ ತಮ್ಮ ದುಡಿಮೆ ಆಶಾದಾಯಕವಾಗಿ ಸಂಪನ್ನಗೊಳ್ಳುತ್ತಿದೆ ಎನ್ನುವ ಮೀನುಗಾರರು ಕೃತಜ್ಞತಾಪೂರ್ವಕವಾಗಿ, ಶ್ರೀ ಮಹಾಂಕಾಳಿ ಅಮ್ಮನವರ ಶಿಲಾಮಯ ದೇಗುಲ ಲೋಕಾರ್ಪಣೆಗೊಳ್ಳುತ್ತಿರುವ ಪವಿತ್ರ ಧಾರ್ಮಿಕ ಸಂಭ್ರಮದ ಶುಭಘಳಿಗೆಯಲ್ಲಿ ಅಮ್ಮನಿಗೆ ಸುವರ್ಣ ಹಾರ ಸಮರ್ಪಿಸಿದಾರೆ.

ಪಚ್ಚಲೆಯಲ್ಲಿ ಪಡಿಮೂಡಿದ ಸುವರ್ಣಹಾರ ಕಷ್ಟಸಹಿಷ್ಣು ಮೀನುಗಾರರ ಭಕ್ತಿಭಾವಗಳ ಮಂದಾರವಾಗಿ ತಾಯಿಯ ಕೊರಳಿಗೆ ಶೋಭಿತವಾಗಲಿದೆ. ಉಸಿರು ಬಿಗಿಯಾಗಿ ಹಿಡಿದು ಸಮುದ್ರದಾಳಕ್ಕೆ ಇಳಿದು ಬಂಡೆಗಲ್ಲುಗಳಿಗೆ ಅಂಟಿಕೊಂಡ ಪಚ್ಚಲೆಯನ್ನು ತರುವ ಅಪಾಯಕಾರಿ ಪರಿಶ್ರಮದ ಪ್ರತಿಯೊಂದು ಕ್ಷಣವೂ ಯುಗವಾಗಿ ಪರಿಣಮಿಸುತ್ತದೆ. ನೀರಿನಾಳದಲ್ಲಿ ಕೇವಲ ಒಂದೆರಡು ನಿಮಿಷವಷ್ಟೇ ಉಸಿರು ಬಿಗಿಹಿಡಿದು ಮುಳುಗಲು ಸಾಧ್ಯ. ಈ ಕ್ಷಿಪ್ರ ಅವಧಿಯಲ್ಲಿ ಪಚ್ಚಲೆ ಸಂಗ್ರಹಿಸಿ ಶರವೇಗದಲ್ಲಿ ಮೇಲೆ ಬರಬೇಕು. ಈ ಅವಧಿ ಮೀರಿದರೆ ಜೀವಕ್ಕೆ ಅಪಾಯ ಖಂಡಿತಾ.

ಸಮುದ್ರದಾಳದ ಬಂಡೆಗಲ್ಲುಗಳಿಗೆ ಅಂಟಿಕೊಂಡಿರುವ ಈ ನೀಲಿಕಲ್ಲುಗಳನ್ನು ಕೀಳಲು ಲಾರಿಯ ಬ್ಲೇಡ್ ನಿಂದ ತಯಾರಿಸಿದ ಮಚ್ಚು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಮೀನುಗಾರರು ಸುಮಾರು ಇಪ್ಪತ್ತು ಮುವತ್ತು ಅಡಿ ನೀರಿನಲ್ಲಿ ಮುಳುಗಿ ಮಚ್ಚು ಉಪಯೋಗಿಸಿ ನೀಲಿಕಲ್ಲುಗಳನ್ನು ತೆಗೆಯುತ್ತಾರೆ. ಇದೆಲ್ಲಾ ಒಂದೇ ಉಸಿರಿಗೆ ಒಂದೇ ನಿಮಿಷದಲ್ಲಿ ನಡೆಯಬೇಕು. ಹೀಗೆ ಮುಳುಗಿ ಮೂರು ನಾಲ್ಕು ಗಂಟೆಗಳ ಅವಧಿಯಲ್ಲಿ 2 ರಿಂದ ಮೂರು ಸಾವಿರದ ತನಕ ನೀಲಿಕಲ್ಲುಗಳನ್ನು ಸಂಗ್ರಹಿಸುತ್ತಾರೆ. ಈ ಕೆಲಸ ಅತ್ಯಂತ ಅಪಾಯಕಾರಿಯಾಗಿದ್ದು,ಇದರಲ್ಲಿ ನಿರತರಾದ ಮೀನುಗಾರರಿಗೆ ಕಿವಿ ಮೂಗಿನಿಂದ ರಕ್ತ ಬರುವುದು, ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಬದುಕಿಗಾಗಿ ಸಾವಿನೊಂದಿಗೆ ಸರಸ.

ಸೃಷ್ಟಿಯು ಪರಿಪಕ್ವತೆಯೆಡೆಗೆ ಸಾಗುತ್ತದೆಯೆಂದು ಹಿಂದೂ ಧರ್ಮದ ಅಚಲವಾದ ನಂಬಿಕೆ. ನೈಸರ್ಗಿಕ ಪರಿಸರವು ದೈವಿಕ ಪ್ರಕೃತಿಯ ಪ್ರತಿರೂಪವೆಂದೇ ಹಿಂದೂ ಧರ್ಮ ಹೇಳುತ್ತದೆ. ಪಂಚಭೂತಗಳಿಂದ ಆಗಿರುವ ಸೃಷ್ಟಿ ಚೇತನಗಳಲ್ಲಿ ನೀರು ಮುಖ್ಯವಾಗಿದೆ ನದಿ ಮತ್ತು ಸಮುದ್ರ ತೀರಗಳಲ್ಲಿ ತಮ್ಮ ನಾಗರಿಕತೆ ಸೃಷ್ಟಿಸಿಕೊಂಡ ಕೊಂಕಣಿ ಖಾರ್ವಿ ಮೀನುಗಾರರು ನೀಲಿಮೆಯ ಹರವಿನಲ್ಲಿ ತಮ್ಮನ್ನು ವಿಧೇಯಿಸಿಕೊಂಡು ತಮಗೆ ಬದುಕು ನೀಡಿದ ದೇವರನ್ನು ಭಕ್ತಿಪೂರ್ವಕವಾಗಿ ಆರಾಧಿಸಿಕೊಂಡು ಬಂದಿದ್ದಾರೆ. ಶ್ರೀ ಮಹಾಂಕಾಳಿ ಅಮ್ಮನವರಿಗೆ ಭಕ್ತಿಭಾವದಿಂದ ಸಮರ್ಪಿಸಿದ ಕೊಡುಗೆ ಇದಕ್ಕೆ ಸಾಕ್ಷಿಯಾಗಿದೆ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *