ಕಾಸರಕೋಡ ಟೊಂಕದ ಕಡಲತೀರದಲ್ಲಿ ಸಾಮೂಹಿಕವಾಗಿ ಮೊಟ್ಟೆ ಇಡಲು ಹೆಚ್ಚು ಸಂಖ್ಯೆಯಲ್ಲಿ ಆಲಿವ್ ರಿಡ್ಲೆ ಆಮೆಗಳು ಬರುತ್ತಿದ್ದು ಇದು ಕರ್ನಾಟಕದಲ್ಲಿ ಅತೀ ದೊಡ್ಡ ಗೂಡುಕಟ್ಟುವ ಸ್ಥಳಗಳಲ್ಲಿ ಒಂದಾಗಿದೆ.
ಕಾಸರಕೋಡ ಟೊಂಕದ ವಿವಾದಿತ ವಾಣಿಜ್ಯ ಬಂದರು ಯೋಜನಾ ಪ್ರದೇಶವು ಸೇರಿದಂತೆ ಕಾಸರಕೋಡಿನ ಕಡಲತೀರವು ಈಗ ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಮೊಟ್ಟೆ ಇಡುವ ಸಂರಕ್ಷಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ.ಇಂದು ಇಲ್ಲಿನ ಅಂತರರಾಷ್ಟ್ರೀಯ ಮನ್ನಣೆ ಪಡೆದ ಇಕೋ ಬೀಚ್ ಕಡಲತೀರದಲ್ಲಿ ಕಡಲಾಮೆಯೊಂದು ಗೂಡು ನಿರ್ಮಿಸಿ ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಟ್ಟಿರುವದು ಕಂಡು ಬಂದಿದೆ. ಇದರೊಂದಿಗೆ ಡಿಸೆಂಬರ್ ದಿಂದ ಇಂದಿನವರೆಗೆ ಒಟ್ಟು 40 ಕಡಲಾಮೆಗಳು ಮೊಟ್ಟೆ ಇಟ್ಟಿರುವ ಗೂಡುಗಳನ್ನು ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಗುರುತಿಸಿ ಅವುಗಳಿಗೆ ಪಂಜರಗಳನ್ನು ನಿರ್ಮಿಸಿ ಸುಮಾರು 4500ಕ್ಕೂಹೆಚ್ಚು ಸಂಖ್ಯೆಯ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಕೈಗೊಂಡಿದೆ.
ಯುಗಾದಿಯ ದಿನ ತಡರಾತ್ರಿ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದ ಹತ್ತಿರ ಸಂರಕ್ಷಣೆ ಮಾಡಲಾಗಿದ್ದ ಕಡಲಾಮೆ ಇಟ್ಟಿರುವ ಗೂಡಿನಲ್ಲಿ 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಿಡ್ಲೆ ಜಾತಿಯ ಕಡಲಾಮೆ ಮರಿಗಳು ಜನಿಸಿದ್ದು ಅವುಗಳನ್ನು ಸ್ಥಳೀಯ ಮೀನುಗಾರರು ಸಮುದ್ರಕ್ಕೆ ಸೇರಿಸಿ ಸಂಭ್ರಮಿಸಿದರು. ಉಪವಿಭಾಗದ ಹೊನ್ನಾವರ ವಲಯ ಅರಣ್ಯಾಧಿಕಾರಿ ವಿಕ್ರಂ ಅವರ ಮಾರ್ಗದರ್ಶನದಲ್ಲಿ ಉಪವಲಯಾಧಿಕಾರಿ ಗೌಸ ನೇತೃತ್ವದ ಮೂವರು ಸಿಬ್ಬಂದಿಗಳ ತಂಡಕ್ಕೆ ಈಭಾಗದಲ್ಲಿ ಕಡಲಾಮೆಮೊಟ್ಟೆಗಳು ಮರಿ ಆಗಿ ಅವುಗಳನ್ನು ಜತನದಿಂದ ಸಮುದ್ರಕ್ಕೆ ಸೇರಿಸುವರೆಗೆ ಗಸ್ತು ತಿರುಗಿ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ವಹಿಸಿದೆ. ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಯ ಈ ಕಾರ್ಯದಲ್ಲಿ ಸಹಕರಿಸುತ್ತಿರುವದು ಇಲ್ಲಿನ ವಿಶೇಷತೆಯಾಗಿದೆ. ಕಾಸರಕೋಡ ಕಡಲ ತೀರವು ಕಡಲಾಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ ತಾಣಗಳಲ್ಲಿ ಒಂದಾಗಿದೆ.