ಹೊನ್ನಾವರದ ಕಾಸರಕೋಡ ಟೊಂಕ ಕಡಲತೀರದಲ್ಲಿ ಈಗ ಎಲ್ಲೆಲ್ಲೂ ಪುತ್ರೋತ್ಸವ ಅಥವಾ ಪುತ್ರಿಯರ ಉತ್ಸವ. ಕಡಲಾಮೆ ಮರಿಗಳು ಮರಳಗೂಡಿನಿಂದ ಇಲ್ಲಿ ಬುದುಬುದು ಮೇಲೆದ್ದು ಬರುತ್ತಿವೆ. ಇನ್ನೂ ಎರಡು ಮೂರು ವಾರಗಳ ಕಾಲ ಪ್ರತಿ ದಿನವೂ ಒಂದಿಷ್ಟು ಗೂಡುಗಳು ತೆರೆದುಕೊಳ್ಳುತ್ತಿರುತ್ತವೆ. ಒಂದೊಂದರಿಂದಲೂ ಹೊರಬರುವ ಪುಟ್ಟ ಪುಟ್ಟ ಆಮೆ ಮರಿಗಳು ಸಮುದ್ರವನ್ನು ಸೇರಲು ತವಕಿಸುವುದನ್ನು ನೋಡುವುದೇ ಚಂದ.
15-20 ವರ್ಷಗಳ ಹಿಂದೆ ಇದೇ ಮರಳಿನಿಂದ ಹೊರಬಿದ್ದ ʼಆಲಿವ್ ರಿಡ್ಲೆʼ ಆಮೆ ಮರಿಗಳು ಸಮುದ್ರಕ್ಕೆ ಹೋಗಿ ಜಲಜಗತ್ತನ್ನು ಸುತ್ತುತ್ತಿದ್ದವು. ಸಂತಾನವೃದ್ಧಿಗೆಂದು ಸಾವಿರಾರು ಕಿಲೊಮೀಟರ್ ದೂರದಿಂದ ಈಜುತ್ತ ತವರಿಗೆ 40-45 ದಿನಗಳ ಹಿಂದೆ ತಾಯಿಕೂರ್ಮಗಳು ಬಂದಿದ್ದವು.
ಸಮುದ್ರದಿಂದ ಒಂದೊಂದಾಗಿ ಮೇಲೆದ್ದು ಬಂದು ಇಲ್ಲಿನ ಮರಳುದಿಬ್ಬದಲ್ಲಿ ಗುಂಡಿ ತೋಡಿ, ತಲಾ 100-150 ಕ್ಕೂ ಅಧಿಕ ಮೊಟ್ಟೆ ಇಟ್ಟು ಹೋಗಿದ್ದವು. ಅವು ಏನೆಲ್ಲ ಕಷ್ಟ ಸಂಕಟಗಳನ್ನು ಎದುರಿಸಿಯೂ ಈ ತವರೂರಿಗೆ ಮತ್ತೆ ಬಂದವು, ಏನೆಲ್ಲ ಚಂದದ ತಂತ್ರಗಳ ಮೂಲಕ ವೈರಿಗಳ ಕಣ್ಣು ತಪ್ಪಿಸಿ ಮೊಟ್ಟೆಗಳನ್ನು ಅವಿತಿಟ್ಟು ಹೋದವು, ಆ ಗೂಡನ್ನು ಹುಡುಕಿ ಕಂಡುಹಿಡಿಯುವುದೇ ಸ್ಥಳೀಯ ಮೀನುಗಾರ ಯುವಕರಿಗೆ ದೊಡ್ಡ ಸವಾಲು ಅದು ಬೇರೆಯದೇ ಕತೆ.
ಆ ಮೊಟ್ಟೆಗಳಿಂದ ಈಗ ಮರಿಗಳು ಹೊರಬರುತ್ತಿವೆ ಸ್ಥಳೀಯ ಕಾಸರಕೋಡ ಟೊಂಕ ಮೀನುಗಾರ ಯುವಕರು ( ಕೊಂಕಣಿ ಖಾರ್ವಿ ಸಮಾಜದ ತಾಂಡೇಲರು, ಖಾರ್ವಿಗಳು, ಮೇಸ್ತರು ) ಅದೆಷ್ಟೊಂದು ಕಾಳಜಿಯಿಂದ ಅಂಥ 70ಕ್ಕೂ ಗೂಡುಗಳನ್ನು ಪತ್ತೆ ಹಚ್ಚಿ, ಅರಣ್ಯ ಇಲಾಖೆಯ ನೆರವಿನಿಂದ ಅವುಗಳ ಸುತ್ತ ರಕ್ಷಣಾ ಕೋಟೆ ಕಟ್ಟಿ ಕಾಯ್ದಿಟ್ಟಿದ್ದರು ಅದು ಇನ್ನೊಂದು ಸರಣಿ ಸಾಹಸದ ಕತೆ. ಈಗ ಮರಿಗಳು ಹೊರಬರುವ ಗಳಿಗೆಯಲ್ಲಿ ಪ್ರತಿ ರಾತ್ರಿಯೂ ಪ್ರತಿ ಪ್ರಸೂತಿ ಗೂಡಿನ ತಪಾಸಣೆ ನಡೆಸುತ್ತ ಆ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಈ ಯುವಕರು ಒಯ್ದು ಬಿಡುತ್ತಿದ್ದಾರೆ. ಇಡೀ ನಾಡೇ ಹೆಮ್ಮೆ ಪಡುವಂಥ ಕೆಲಸ ಇಲ್ಲಿ ನಡೆಯುತ್ತಿದೆ. “ಜೈನ ಜಟಕಾ ಸಂಘ”ದ ಈ ಯುವಕರಿಗೆ (ರಾಜೇಶ, ಗಣಪತಿ, ಮಾಂಜಾ ,ರಾಹುಲ್, ರಮೇಶ್, ಭಾಸ್ಕರ, ವಿನಯ್, ಗಿರೀಶ್, ರಾಜು, ನರಸಿಂಹ, ರಚಿತ್…ಇವರಿಗೆಲ್ಲ ) ಮಾರ್ಗದರ್ಶಿಯಾಗಿ ಡಾ. ಪ್ರಕಾಶ್ ಮೇಸ್ತ ಅಹೋರಾತ್ರಿ ಕಡಲಾಮೆಗಳ ರಕ್ಷಣೆಗೆ ಓಡಾಡುತ್ತಿದ್ದಾರೆ. ಇವರು ಕರ್ನಾಟಕ ಜೀವಿವೈವಿಧ್ಯ ಮಂಡಳಿಯ ಸದಸ್ಯರು….ಹೊನ್ನಾವರದವರು.
ಬೇರೆ ಯಾವ ದೇಶದಲ್ಲಾದರೂ ಇದು ಊರಿಗೆ ಊರೇ ಸಂಭ್ರಮಿಸುವ ಸಂದರ್ಭವಾಗಿರುತ್ತಿತ್ತು. ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಇಷ್ಟೊಂದು ಕಡಲಕೂರ್ಮಗಳ ಮರಿಗಳು ಮೇಲೆದ್ದು ಬರುವ ವೈಚಿತ್ರ್ಯವೇ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗುತ್ತಿತ್ತು. ಶಾಲೆ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆತಂದು ಈ ಕಗ್ಗತ್ತಲ ನಾಟಕವನ್ನು ತೋರಿಸುತ್ತಿದ್ದರು. ಸ್ಥಳಿಯ ಸಂಘಟನೆಗಳು ಈ ಯುವಪಡೆಯನ್ನು ಹಾಡಿ ಹೊಗಳುತ್ತಿದ್ದವು. ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಾಗೂ ಕಡಲ ರಕ್ಷಣಾ ಪಡೆಗಳಿಗೆ ಇವು ಹಬ್ಬದ ದಿನಗಳಾಗಬೇಕಿದ್ದವು.
ಇಲ್ಲಿ ಹಾಗೇನೂ ಆಗುತ್ತಿಲ್ಲ. ಕಗ್ಗತ್ತಲಲ್ಲಿ ಅಬ್ಬರಿಸುವ ಕಡಲಿನ ಅಂಚಿನಲ್ಲಿ ಈ ಯುವಕರು ಮೊಬೈಲ್‌ನ ಮಿಣುಕುದೀಪ ಹಿಡಿದು ಸದ್ದಿಲ್ಲದೆ ಹೆಜ್ಜೆ ಹಾಕುತ್ತಾರೆ. ಉಬ್ಬುತ್ತ ಬಿರಿಯುತ್ತಿರುವ ಗೂಡುಗಳನ್ನು ಪತ್ತೆ ಹಚ್ಚಿ, ಅಲ್ಲಿಗೆ ನೀರು ತುಂಬಿದ ಟಬ್‌ಗಳನ್ನು ಒಯ್ಯುತ್ತಾರೆ. ಗೂಡನ್ನು ಮೆಲ್ಲಗೆ ಕೆದಕುತ್ತ ಒಂದೊಂದೇ ಮರಿಗಳನ್ನು ಎಣಿಸಿ ತುಂಬುತ್ತಾರೆ. ಯಾರಾದರೂ ತುಸು ಆಸಕ್ತಿ ತೋರಬಲ್ಲ ವ್ಯಕ್ತಿಗಳಿದ್ದರೆ ಅಂಥವರನ್ನು ಕರೆದೊಯ್ದು, ಅವರ ಮೂಲಕ ಈ ಕಡಲಾಮೆಯ ಬಾಗಿನವನ್ನು ಸಮುದ್ರಕ್ಕೆ ಅರ್ಪಿಸುತ್ತಾರೆ. ಕಾರವಾರದ ಸಾಗರ ವಸ್ತುಸಂಗ್ರಹಾಲಯದಲ್ಲಿ (ಮಾರ್ಚ್ 30) “ಆಮೆ ಹಬ್ಬ”ವನ್ನು ಆಯೋಜಿಸಲಾಗಿದೆ. ಅಲ್ಲಿನ ಚಿತ್ರಪಟಗಳಲ್ಲಿ ಆಮೆಯ ಸಂತಾನಾಭಿವೃದ್ಧಿಯ ಚಮತ್ಕಾರಗಳ ವಿವರಣೆಗಳಿವೆ. ಇಲ್ಲಿ ಹೊನ್ನಾವರದ ಕಾಸರಕೋಡ ಟೊಂಕದಲ್ಲಿ ಸದ್ದಿಲ್ಲದ ನಿತ್ಯೋತ್ಸವ ನಡೆಯುತ್ತಿದೆ.
ಚುಕ್ಕಿ ಚಂದ್ರಮರ ಮಂದ ಬೆಳಕಿನಲ್ಲಿ ಅಮ್ಮ ಹೋದ ಜಾಡನ್ನು ಅರಸುತ್ತ, ಒದ್ದೆ ಮರಳಿನ ಮೇಲೆ ಪುಟ್ಟ ಪುಟ್ಟ ರೆಕ್ಕೆಗುರುತುಗಳನ್ನು ಮೂಡಿಸುತ್ತ ನೂರಿನ್ನೂರು ಮರಿಯಾಮೆಗಳು ಪ್ರತಿ ರಾತ್ರಿಯೂ ಇಲ್ಲಿ ಕಡಲನ್ನು ಸೇರುತ್ತಿವೆ.
“ಹೋಗಿಬನ್ನಿ ಪುಟಾಣಿಗಳೇ” ನೀವು ಮರಳಿ ಬರುವವರೆಗೂ ನಾವು ಈ ನೆಲವನ್ನು ನಿಮಗಾಗಿ ಸುರಕ್ಷಿತವಾಗಿ ಇಡುತ್ತೇವೆʼ- ಎಂದು ಹಾರೈಸುತ್ತಾರೆ.
ಕಡಲ ವಿಜ್ಞಾನಿ ಡಾ. ಪ್ರಕಾಶ್ ಮೇಸ್ತ.
[ಕಡಲಾಮೆ ಮರಿಗಳ ಈ ವಿಶಿಷ್ಟ ಬಾಗಿನಕ್ಕೆ ಕೈಜೋಡಿಸುವ ಆಸಕ್ತರು ಡಾ. ಪ್ರಕಾಶ್ ಮೇಸ್ತ 9342470560 ಇವರನ್ನು ಸಂಪರ್ಕಿಸಬಹುದು]
ಬರಹಗಾರ “ನಾಗೇಶ್ ಹೆಗಡೆ