ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ಕೋಡಿ ಕನ್ಯಾನದ ಸಮುದ್ರತೀರ ನಿವಾಸಿಗಳ ಮನವಿ

ಕೋಡಿ ಕನ್ಯಾನದ ಹೊಸಬೆಂಗ್ರೆ ಭಾಗದ ಮೀನುಗಾರಿಕೆ ರಸ್ತೆಯು ಕಡಲ ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾಗುತ್ತಿವೆ. ಸುಮಾರು 4-5 ವರ್ಷಗಳಿಂದ ಹೆಚ್ಚಾದ ಕಡಲ್ಕೋರೆತಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂದು ಜನವಸತಿ ಪ್ರದೇಶದ ರಸ್ತೆ ಕಡಿದು ಹೋಗುತ್ತಿದೆ.

ಕುಸಿದು ಬಿದ್ದಿರುವ ತಾತ್ಕಾಲಿಕ ತಡೆಗೋಡೆಗಳು, ಸಮುದ್ರದ ಅಲೆಗಳ ಅಬ್ಬರಕ್ಕೆ ನೆಲಕಚ್ಚಿದ ರಸ್ತೆಗಳು, ಸಮುದ್ರದ ಒಡಲನ್ನು ಸೇರುತ್ತಿರುವ ಮರಗಳು, ಹಿಂದೊಮ್ಮೆ ಇಲ್ಲೊಂದು ರಸ್ತೆಯೇ ಇಲ್ಲದಂತೆ ಊರನ್ನು ನುಂಗಿಹಾಕುತ್ತಿರುವ ಅಲೆಗಳು. ಸಮುದ್ರತೀರ ನಿವಾಸಿಗಳ ಆತಂಕ ಹೆಚ್ಚಿಸುವಂತೆ ಕಡಲು ಬೋರ್ಗರೆಯುತ್ತಿದೆ. ಸಮುದ್ರ ಕಿನಾರೆಯಲ್ಲಿ ಬೀಚ್ ಅಭಿವೃದ್ಧಿಯ ನೆಪವೊಡ್ಡಿ ಅಕ್ರಮವಾಗಿ ರೆಸಾರ್ಟ್ ಮತ್ತು ಹಲವಾರು ಕಟ್ಟಡ ನಿರ್ಮಾಣ ಮಾಡಿ, ಬೃಹತ್‌ ಗಾತ್ರದ ಮರಗಳನ್ನು ಕಡಿದಿರುವುದೇ ಕಡಲ್ಕೋರೆತಕ್ಕೆ ಮೂಲ ಕಾರಣವೆಂದು ಈ ಪರಿಸರದ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕೇವಲ ಚುನಾವಣೆ ಬಂದಾಗ ಮಾತ್ರ ಈ ಭಾಗದ ಕಡೆ ತಲೆ ಹಾಕಿ ಮಲಗುವ ರಾಜಕಾರಣಿಗಳಿಗೆ ಮಿಕ್ಕ ಸಂದರ್ಭದಲ್ಲಿ ಗ್ರಾಮಸ್ಥರ ಗೋಳು ಕೇಳಿಸುವುದಿಲ್ಲವೇ ಎಂದು ಗ್ರಾಮಸ್ಥರು ಇಲ್ಲಿನ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಅನೇಕ ರಾಜಕೀಯ ನಾಯಕರುಗಳು ಮತ್ತು ಅಧಿಕಾರಿಗಳು ಹಲವಾರು ಬಾರಿ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರ ಭೇಟಿಯು ಕೇವಲ ಚುನಾವಣೆ ಆಧಾರಿತ ಪೊಳ್ಳು ಭರವಸೆಯೇ ವಿನಃ ವಾಸ್ತವದಲ್ಲಿ ಯಾವುದೇ ಕೆಲಸವಾಗುತ್ತಿಲ್ಲವೆನ್ನುವುದು ಗ್ರಾಮಸ್ಥರ ಅಳಲು.

ತುಂಬ ಅಪಾಯಕಾರಿ ಸ್ಥಿತಿಯಲ್ಲಿರುವ ಕೆಲವು ಮನೆಗಳಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಮತ್ತು ಸರಕಾರದ ಹಣ ಮಂಜೂರಾದ ನಂತರ ಶಾಶ್ವತ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಶಾಸಕ ಕಿರಣ್ ಕೊಡ್ಗಿಯವರಿಗೆ ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯರಲ್ಲಿ ಮನವಿ ಮಾಡಲಾಗಿದೆ.

ವರದಿ: ನಾಗರಾಜ್ ಕೋಡಿ
ಪ್ರತಿನಿಧಿ kharvionline.com

Leave a Reply

Your email address will not be published. Required fields are marked *