ಸಮಾಜದ ಮೂಲ ಉದ್ಯೋಗದ ಜೊತೆಗ ವಿದ್ಯೆಯಲ್ಲೂ ಮುಂದೆ ಬರಬೇಕು: ಕೃಷ್ಣಾ ಎಚ್. ತಾಂಡೆಲ
ಮೀನುಗಾರಿಕೆಯನ್ನೇ ಮೂಲ ಉದ್ಯಮವನ್ನಾಗಿಸಿಕೊಂಡ ಕೊಂಕಣ ಖಾರ್ವಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಎಲ್ಲರ ಸಹಕಾರ ಅಗತ್ಯ ಎಂದು ತಹಶೀಲ್ದಾರ ಪ್ರವೀಣ ಹುಚ್ಚಣ್ಣನವರ ಹೇಳಿದರು. ಅವರು ಪಟ್ಟಣದ ಪಿ ಎಮ್ ಪ್ರೌಢಶಾಲೆಯ ರೈತಭವನದಲ್ಲಿ ಕೊಂಕಣ ಖಾರ್ವಿ ಸಮಾಜದ ನೌಕರರ ಸಂಘದ ಆಶ್ರಯದಲ್ಲಿ 2022-23 ನೇ ಸಾಲಿನಲ್ಲಿ ಖಾರ್ವಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊಂಕಣ ಖಾರ್ವಿ ಸಮಾಜದವರು ಮೀನುಗಾರರು ಎನ್ನುವ ಉದಾಸೀನತೆ ಬೇಡ. ಅವರ ಮಕ್ಕಳೂ ಹೆಚ್ಚಿನ ಸಾಧನೆ ಮಾಡಲಿ, ಖಾರ್ವಿ ಸಮಾಜದ ನೌಕರರ ಸಂಘ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುಕೊಳ್ಳುವಂತಾಗಲಿ ಎಂದರು.
ಇದೇ ವೇಳೆ ತಾಲೂಕಿನ ವಿವಿಧ ಶಾಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ನಿವೃತ್ತ ಭೂಮಾಪನಾ ಇಲಾಖೆ ಅಧಿಕಾರಿ, ಕೃಷ್ಣಾ ಎಚ್ ತಾಂಡೆಲ, ನಿವೃತ್ತ ಪೊಲೀಸ್ ಅಧಿಕಾರಿ ಚುಡಾಮಣಿ ಡಿ ತಾಂಡೇಲ, ನಿವೃತ್ತ ಎಂಜಿನೀಯರ ಜ್ಞಾನೇಶ್ವರ ಬಾನಾವಳಿಕರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿ ಕೃಷ್ಣಾ ಎಚ್ ತಾಂಡೇಲ ಮಾತನಾಡಿ ಹಿಂದೆ ನಮ್ಮ ಶಾಲಾ ದಿನಗಳಲ್ಲಿ ನಾವು ಮೀನುಗಾರರು ಎನ್ನುವ ಕೀಳರಿಮೆ ಇತ್ತು ಆದರೆ ಈಗ ನಮ್ಮ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದ್ದಾರೆ. ಮೀನುಗಾರರು ದುಡಿಮೆಯ ಆಸೆಗಾಗಿ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬಾರದು. ಸಮಾಜದ ಮೂಲ ಉದ್ಯೋಗದ ಜೊತೆಗ ವಿದ್ಯೆಯಲ್ಲೂ ಮುಂದೆ ಬರಬೇಕು ಎಂದರು. ಅಲ್ಲದೆ ಸರಕಾರ ಕೃಷಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನದ ಮಾದರಿಯಲ್ಲೆ ಮೀನುಗಾರರ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡುವಂತೆ ಸಚಿವರಲ್ಲಿ ವಿನಂತಿಸಿಕ್ಕೊಳ್ಳುತ್ತೇನೆ ಎಂದರು. ನ್ಯಾಯವಾದಿ ಸುರೇಶ ಬಾನಾವಳಿಕರ ಮಾತನಾಡಿ ಕೊಂಕಣ ಖಾರ್ವಿ ಸಮಾಜದಲ್ಲಿ ಉನ್ನತ ಹುದ್ದೆಗಳು ಇನ್ನೂ ಪ್ರಾಪ್ತವಾಗಿಲ್ಲ. ಯಾರೂ ಐಏಎಸ್, ಐಪಿಎಸ್ ಅಧಿಕಾರಿಗಳಾಗಿಲ್ಲ. ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸ್ಥಾನ ಪಡೆಯಬೇಕು. ಸಮಾಜದ ಸ್ಥಿತಿವಂತರು, ಉದ್ಯೋಗಸ್ಥರು ಇನ್ನು ಮುಂದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾದರೆ ಮುಂದೊಂದು ದಿನ ಸಮಾಜಕ್ಕೆ ಉನ್ನತ ಹುದ್ದೆಗಳು ಪ್ರಾಪ್ತವಾಗುವ ಸಂಭ್ರಮ ದೂರವಿಲ್ಲ. ಅವಕಾಶಗಳು ವಿಫುಲವಾಗಿವೆ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಜಾಹ್ನವಿ ದಿಗಂಬರ ತಾಂಡೇಲ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆ ಎಸ್ ಆರ ಟಿ ಸಿ ಕುಮಟಾ ಡಿಪೊ ಮ್ಯಾನೇಜರ ಯುಗಾ ಬಾನಾವಳಿಕರ ಮಾತನಾಡಿ
ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಹೊಂದುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಕ್ರಿಯಾಶೀಲ ಶಿಕ್ಷಕ ಜಿ ಆರ್ ತಾಂಡೇಲ ನೇತೃತ್ವದಲ್ಲಿ ಕೊಂಕಣ ಖಾರ್ವಿ ಸಮಾಜದ ನೌಕರರ ಸಂಘದ ಮೂಲಕ ಸಮಾಜದ ಮಕ್ಕಳಿಗೆ ಪುರಸ್ಕರಿಸುವಂತಹ ಕಾರ್ಯ ಸಫಲವಾಗಿದೆ. ಇಂತಹ ಪುರಸ್ಕಾರವನ್ನು ಪಡೆದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಎಂದು ಕರೆ ನೀಡಿದರು.
ಸಂಘಟಕ ಜಿ ಆರ್ ತಾಂಡೇಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕೊಂಕಣ ಖಾರ್ವಿ ಸಮಾಜದ ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಪ್ರಥಮ ವಿನೂತನ ಕಾರ್ಯಕ್ರಮ ಇದಾಗಿದ್ದು ಕಾರ್ಯಕ್ರಮಕ್ಕೆ ಕೈ ಜೋಡಿಸಿದವರನ್ನು ಸ್ಮರಿಸಿದರು ಹಾಗೂ ಕಾರ್ಯಕ್ರಮವನ್ನು ನಿರ್ವಹಿಸಿದರು. ನಾಗರಾಜ ಬಾನಾವಳಿಕರ ವಂದಿಸಿದರು.
ಕೊಂಕಣ ಖಾರ್ವಿ ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಪ್ರಪ್ರಥಮ ಕಾರ್ಯಕ್ರಮ ಇದಾಗಿದ್ದು ಸಮಾಜದ ಪ್ರತಿಭಾವಂತ ಹಾಗೂ ಕ್ರಿಯಾಶೀಲ ಶಿಕ್ಷಕ ಜಿ ಆರ್ ತಾಂಡೇಲರ ಪ್ರಯತ್ನ ಶ್ಲಾಘನೀಯ. ಸಮಾಜದ ಪ್ರಮುಖರು ಇಂತಹ ಕಾರ್ಯಕ್ಕೆ ಕೈಜೋಡಿಸಿ ಸಮಾಜದ ಏಳಿಗೆಗೆ ಸಹಕರಿಸಬೇಕು. ಮೀನುಗಾರರು ಮೀನುಗಾರಿಕೆಯ ಜೊತೆಗೇ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಸುರೇಶ ಬಾನಾವಳಿಕರ ನ್ಯಾಯವಾದಿ, ಅಂಕೋಲಾ.
ಮೀನುಗಾರ ಸಮಾಜಕ್ಕೆ ಶೈಕ್ಷಣಿಕ, ಔದ್ಯೋಗಿಕ ಮಾಹಿತಿಯ ಕೊರತೆ ಕಾಡುತ್ತದೆ. ಕೊಂಕಣ ಖಾರ್ವಿ ಸಮಾಜದ ನೌಕರ ಸಂಘದ ವತಿಯಿಂದ ಸಮಾಜದ ಮಕ್ಕಳಿಗಾಗಿಯೇ ಉನ್ನತ ವ್ಯಾಸಂಗದ ಕೋಚಿಂಗ್ ಕ್ಲಾಸುಗಳನ್ನು ಪ್ರಾರಂಭಿಸಬೇಕು.
ತುಳಸೀದಾಸ ಬಾನಾವಳಿಕರ, ಅವರ್ಸಾ.