ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನದ ವರ್ಧಂತ್ಯುತ್ಸವ ಮತ್ತು ಶೃಂಗೇರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ಶ್ರೀ ಮಹಾಂಕಾಳಿ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ವಾರ್ಷಿಕ ವರ್ಧಂತ್ಯುತ್ಸವದ ಮತ್ತು ಶೃಂಗೇರಿ ಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ತಾರೀಕು 16.1.2024 ಮಂಗಳವಾರ ಜರುಗಲಿದೆ. ಕೊಂಕಣಿ ಖಾರ್ವಿ ಸಮಾಜದ ಗುರುಮಠವಾದ ಶ್ರೀ ಶೃಂಗೇರಿ ಪೀಠಾಧೀಶ್ವರ ಪರಮ ಕೃಪೆಯಿಂದ ಸಮಾಜಕ್ಕೆ ಇದೊಂದು ಸುವರ್ಣಭಾಗ್ಯವಾಗಿದೆ. ಈ ಹಿಂದೆ ಕುಂದಾಪುರದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಶೃಂಗೇರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಅತ್ಯಂತ ವಿಜೃಂಬಣೆಯಿಂದ ನಡೆದಿದ್ದು, ಇದೀಗ ಶ್ರೀಗುರುಗಳು ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನದ ವರ್ಧಂತ್ಯುತ್ಸವದ ಶುಭ ಸಂಧರ್ಭದಲ್ಲಿ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ವಿರಾಜಮಾನವಾಗಲಿರುವುದು ಪರಮ ಸೌಭಾಗ್ಯವಾಗಿದೆ. ಗಂಗೊಳ್ಳಿಯ ಇತಿಹಾಸದಲ್ಲಿ ಇದು ಪ್ರಥಮವಾಗಿದ್ದು, ಪಡುವಣ ಕಡಲಿನ ಜಯಘೋಷದಲ್ಲಿ ಈ ಪವಿತ್ರ ಧಾರ್ಮಿಕ ಸಂಭ್ರಮ ಸಂಪನ್ನಗೊಳ್ಳಲಿದೆ.

ಇದರ ಹಿನ್ನೆಲೆಯಲ್ಲಿ ಭವ್ಯ ಮತ್ತು ಪವಿತ್ರ ಧಾರ್ಮಿಕ ಪರಂಪರೆ,ಇತಿಹಾಸ ಹೊಂದಿರುವ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಸಂಕ್ಷಿಪ್ತವಾಗಿ ಅವಲೋಕನ ಮಾಡೋಣ.

ಅಡ್ಡಪಲ್ಲಕ್ಕಿ ಇತಿಹಾಸವನ್ನು ಅವಲೋಕಿಸಿದಾಗ ಅದು ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದರ ಆಚರಣೆ 1867 ರಲ್ಲಿ ಚಾಲ್ತಿಗೆ ಬಂದ ಬಗ್ಗೆ ಶೃಂಗೇರಿ ಮಠದ ಇತಿಹಾಸ ದಾಖಲಾತಿಯಲ್ಲಿ ನಮೂದಾಗಿದೆ. 1868 ಜುಲೈ 27 ರ ಶೃಂಗೇರಿ ಮಠದ ದಾಖಲಾತಿಯಲ್ಲಿ ಮೈಸೂರು ರಾಜ್ಯದಲ್ಲಿ ಶೃಂಗೇರಿ ಮಠಾಧೀಶರಿಗೆ ಮಾತ್ರ ಅಡ್ಡಪಲ್ಲಕ್ಕಿ ಉತ್ಸವ ಮಾಡಲು ಆಗಿನ ಬ್ರಿಟಿಷ್ ಸರ್ಕಾರ ಅನುಮತಿ ಕೊಟ್ಟಿತ್ತು ಮೈಸೂರು ರಾಜ್ಯದ ಬ್ರಿಟಿಷ್ ಕಮಿಷನರ್ ಈ ಬಗ್ಗೆ ನೀಡಿದ ಆದೇಶ ಪ್ರತಿ ಶೃಂಗೇರಿ ಮಠದ ಸುರ್ಪದಿಯಲ್ಲಿ ಈಗಲೂ ಇದೆ.

ಅಂದಿನಿಂದ ಇಂದಿನವರೆಗೂ ಶ್ರೀ ಶೃಂಗೇರಿ ಪೀಠ ಅಡ್ಡಪಲ್ಲಕ್ಕಿ ಪರಂಪರೆಯನ್ನು ನಿರಾಂತಕವಾಗಿ ಮತ್ತು ನಿರಂತರವಾಗಿ ನಡೆಸಿಕೊಂಡು ಬಂದಿರುವ ಶ್ರೇಷ್ಠ ಪದ್ಧತಿಯಾಗಿದೆ. ಶ್ರೀ ಶೃಂಗೇರಿ ಶಾರದಾ ಪೀಠದ ಭವ್ಯ ಪರಂಪರೆಗೆ ಅಂದಿನ ಬ್ರಿಟಿಷ್ ಸರ್ಕಾರ ಎಷ್ಟೊಂದು ಗೌರವಾದರ ನೀಡುತ್ತಿತ್ತು ಎಂಬುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ. ಶ್ರೀ ಗುರುವರ್ಯರ ಪರಮಾನುಗ್ರಹದ ದಿವ್ಯ ಕೃಪೆಯಿಂದ ಕೊಂಕಣಿ ಖಾರ್ವಿ ಸಮಾಜಕ್ಕೆ ಅಡ್ಡಪಲ್ಲಕ್ಕಿ ಉತ್ಸವ ಮಾಡುವ ಸುವರ್ಣಾವಕಾಶ ಲಭಿಸಿದೆ. ಈ ಸೌಭಾಗ್ಯದ ಸುವರ್ಣ ಗಳಿಗೆಗಾಗಿ ಕ್ಷಣಗಣನೆ ಪ್ರಾರಂಭವಾಗಿದೆ.

ಈ ಭವ್ಯ ಮತ್ತು ಪವಿತ್ರ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕೊಂಕಣಿ ಖಾರ್ವಿ ಸಮಾಜ ಭಾಂಧವರು ಮತ್ತು ಸಾರ್ವಜನಿಕ ಭಕ್ತಾದಿಗಳು ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ಸನ್ನಿಧಿಗೆ ಚಿತ್ತೈಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಹಾಂಕಾಳಿ ದೇವಸ್ಥಾನ ಆಡಳಿತ ಮಂಡಳಿಯವರು ವಿಜ್ಞಾಪಿಸಿಕೊಂಡಿದ್ದಾರೆ. ಇತಿಹಾಸದ ಸ್ಮರಣಿಕೆಯಲ್ಲಿ ಅಚ್ಚಳಿಯದ ದಾಖಲಾತಿ ಸೃಷ್ಟಿಸುವ ಈ ಭವ್ಯ ಉತ್ಸವಕ್ಕಾಗಿ ಪಡುವಣ ಕಡಲಿನ ಗಂಗೊಳ್ಳಿ ಮದುವಣಗಿತ್ತಿಯಂತೆ ಸಜ್ಜುಗೊಳ್ಳುತ್ತಿದೆ.


Report: ಸುಧಾಕರ್ ಖಾರ್ವಿ
kharvionline.com

Leave a Reply

Your email address will not be published. Required fields are marked *