ಟೊಂಕಾ ಖಾರ್ವಿ ಮೀನುಗಾರರ ಅಗಾಧವಾದ ಪರಿಶ್ರಮಕ್ಕೆ ಸಂದ ಗೌರವ

ಹೊನ್ನಾವರ ಕಾಸರಕೋಡು ಟೊಂಕಾ ಆಲೀವ್ ರಿಡ್ಲೇ ಪ್ರಭೇಧದ ಕಡಲಾಮೆಗಳ ಸುರಕ್ಷಿತ ತಾಣವಾಗಿದ್ದು, ಇಲ್ಲಿ ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಕಡಲಾಮೆಗಳು ಮೊಟ್ಟೆಯಿಡಲು ಬರುತ್ತವೆ. ಹೀಗೆ ಬರುವ ಕಡಲಾಮೆಗಳ ಮೊಟ್ಟೆಗಳನ್ನು ಸುರಕ್ಷಿತವಾಗಿ ಜತನದಿಂದ ಕಾಪಾಡಿ ಮರಿ ಮಾಡಿ ಸಮುದ್ರಕ್ಕೆ ಬಿಡುವ ಪರಿಪಾಠವನ್ನು ಸ್ಥಳೀಯ ಮೀನುಗಾರರು ಹತ್ತು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಕೊಂಕಣಿ ಖಾರ್ವಿ ಮೀನುಗಾರರ ಈ ಅಭೂತಪೂರ್ವ ಕಡಲಾಮೆ ಸಂರಕ್ಷಣೆ ಮತ್ತು ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯಕ್ಕೆ ಗೌರವಪೂರ್ವಕ ಪ್ರಶಸ್ತಿ ಲಭಿಸಿದೆ. ಯೂನಿವರ್ಸಲ್ ಟ್ರಸ್ಟ್ ಮಂಗಳೂರಿನಲ್ಲಿ ತಾರೀಕು 26.1.2024 ರಂದು ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ Environment Conclave ದಲ್ಲಿ ಟೊಂಕಾ ಕಾಸರಕೋಡು ಕೊಂಕಣಿ ಖಾರ್ವಿ ಮೀನುಗಾರ ಟೊಂಕಾ 1 ರ ವಾಡೆಯ ಮೀನುಗಾರರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಾಡೆ ಬುದುವಂತರಾದ ಶ್ರೀ ರಾಜೇಶ್ ಗೋವಿಂದ ತಾಂಡೇಲ ಸನ್ಮಾನ ಸ್ವೀಕರಿಸಿದರು. ಟೊಂಕಾ ಕಡಲಾಮೆಗಳ ಬಗ್ಗೆ ಕಿರುಚಿತ್ರ ಪ್ರಸ್ತುತಿ ಪಡಿಸಿದ ಹೊನ್ನಾವರ ಟ್ರಸ್ಟ್ ನ ಸಂದೀಪ್ ಹೆಗಡೆಯವರಿಗೂ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟೊಂಕಾ ಕಾಸರಕೋಡು ಕೊಂಕಣಿ ಖಾರ್ವಿ ಮೀನುಗಾರರು ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪರಿಸರವನ್ನಾಗಿ ಮಾಡಲು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈ ಕಡಲತೀರ ಆಲೀವ್ ರಿಡ್ಲೇ ಪ್ರಭೇಧದ ಕಡಲಾಮೆಗಳ ಸುರಕ್ಷಿತ ತವರು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪರಿಸರ ಕಾಳಜಿ, ಸಮುದ್ರದ ವಿಶಿಷ್ಟ ಜಲಚರ ಜೀವಿಗಳಾದ ಕಡಲಾಮೆಗಳನ್ನು ನಿರಂತರವಾಗಿ ರಕ್ಷಣೆ ಮಾಡುತ್ತಲೇ ಬಂದಿರುವ ಟೊಂಕಾ ಕಾಸರಕೋಡು ಕೊಂಕಣಿ ಖಾರ್ವಿ ಮೀನುಗಾರರ ಅಗಾಧವಾದ ಪರಿಶ್ರಮಕ್ಕೆ ಸೂಕ್ತ ಗೌರವ ಸಂದಿದ್ದು, ಖಾರ್ವಿ ಆನ್ಲೈನ್ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅವರ ಈ ಸತ್ಕಾರ್ಯ ನಿರಂತರವಾಗಿ ನಡೆಯಲಿ ಎಂಬ ಹಾರೈಕೆ ನಮ್ಮದಾಗಿದೆ.

www.kharvionline.com

Leave a Reply

Your email address will not be published. Required fields are marked *