ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಯಾಕ ಮೀನುಗಾರರ ಮೇಲೆ ದೌರ್ಜನ್ಯ ಎಸಗಿ ಬಂಧಿಸಿದ ಅಧಿಕಾರಿಗಳ ನಡತೆಯನ್ನು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘವು ತೀವ್ರವಾಗಿ ಖಂಡಿಸುತ್ತದೆ. ಸಂಘದ ಅಧ್ಯಕ್ಷರಾದ ಮೋಹನ್ ಬನವಾಳಿಕರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ತಾಂಡೇಲರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ನಮ್ಮವರು ಕಳೆದ 50 ವರ್ಷಗಳ ಹಿಂದೆ ಸಮುದ್ರ ಕೊರೆತದಿಂದ ಮುಳುಗಿ ಹೋದ ಮಲ್ಲುಕುರ್ವಾ ಗ್ರಾಮದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿ ಕಾಸರಕೋಡು ಟೊಂಕಾದಲ್ಲಿ ನೆಲೆಸಿರುತ್ತಾರೆ.
ಇಂತಹ ಬಡ ಮೀನುಗಾರರು ನೆಲೆ ನಿಂತ ಜಾಗದ ಸರ್ವೇ ಮಾಡಿ ಅವರಿಗೆ ಒಂದು RTC ನೀಡಲು ಅಧಿಕಾರಿಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಈ ಹಿಂದೆ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು,ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರರ ಸಭೆಯಲ್ಲಿ ಅಂದಿನ ಭಟ್ಕಳದ ಸಹಾಯಕ ಕಮಿಷನರ್ ರವರು 2 ತಿಂಗಳೊಳಗೆ ಆರ್ ಟಿ ಸಿ ಮಾಡಿಕೊಡುತ್ತೇವೆ ಎಂದು ಹೇಳಿದ್ರು ಇದುವರೆಗೂ ಮಾಡಿಕೊಡಲು ವಿಫಲರಾಗಿದ್ದಾರೆ.
ಆದರೆ ಎಲ್ಲಿಂದಲೋ ಬಂದ ಖಾಸಗಿ ಕಂಪನಿಯವರಿಗೆ ಅಪಾರ ಪೋಲೀಸ್ ಬಂದೋಬಸ್ತ್ ನೊಂದಿಗೆ ಬಿಸಿಲಿನಲ್ಲಿ ನಿಂತು ಹೈಟೆಡ್ ಲೈನ್ ಗುರುತಿಸುವ ನೆಪದಲ್ಲಿ ನಮ್ಮವರನ್ನು ವಂಚಿಸಲು ಹೊರಟಿದ್ದಾರೆ.
Hppl ಕಂಪನಿಗೆ 93 ಎಕರೆ ಜಾಗವನ್ನು ನೀಡಿ ಬಡ ಒಣಮೀನು ವ್ಯಾಪರಸ್ಥರನ್ನು ಒಕ್ಕಲೆಬ್ಬಿಸಲಾಯಿತು.ಈಗ ಹೈಟೆಡ್ ಲೈನ್ ಗುರುತಿಸುವ ನೆಪದಲ್ಲಿ ಮೀನುಗಾರರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಹಾಗಾದರೆ ನಾವು ಅಲೆಮಾರಿ ಜನಾಂಗದವರೇನು? ಅಧಿಕಾರಿಗಳು ಈ ರೀತಿ ತಾಳ್ಮೆ ಕಳೆದುಕೊಂಡು ಶಾಂತಿಯುತವಾಗಿ ಪ್ರತಿಭಟಿಸುವವರನ್ನು ಎಳೆದು ಮಹಿಳೆಯರು ಅಂತ ನೋಡದೇ ಇಲ್ಲಸಲ್ಲದ ಸೆಕ್ಷನ್ ಹಾಕಿ ಬಂಧಿಸಿ ಜೈಲಿಗೆ ಅಟ್ಟಿದ್ದು ನ್ಯಾಯವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸ್ವತ ಮೀನುಗಾರರಾಗಿದ್ದು ಮೀನುಗಾರರ ಮೇಲೆ ,ವಿಶೇಷವಾಗಿ ನಮ್ಮ ಸಮಾಜದ ಮೇಲೆ ಒಲವು ಹೊಂದಿರುವ ಕರ್ನಾಟಕ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಸನ್ಮಾನ್ಯ ಮಂಕಾಳ ವೈದ್ಯರ ಮೇಲೆ ನಮಗೆ ಅಪಾರವಾದ ಗೌರವವಿದ್ದು,ಅವರು ಯಾವುದೇ ಕಾರಣಕ್ಕೂ ನಮ್ಮ ಮೀನುಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ದೃಡವಾದ ನಂಬಿಕೆಯನ್ನು ನಾವು ಹೊಂದಿರುತ್ತೇವೆ.
ಹಾಗೂ ಅತೀ ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಡಬೇಕೇಂದು ಮತ್ತು ಬಂಧಿತರಾಗಿರುವವರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘದ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.