ಕಂಚುಗೋಡಿನಲ್ಲಿ ಶ್ರೀ ರಾಮ ಮಂದಿರದ ಸುವರ್ಣ ಮಹೋತ್ಸವ “ಸುವರ್ಣ ಸಂಭ್ರಮ – ಸಂತಸ ಸಂಗಮ”

ಪಡುವಣ ಕಡಲಿನ ಮುತ್ತಿನಹಾರ ಎಂಬ ಪರಮ ಶ್ರೇಷ್ಠ ಹೆಗ್ಗಳಿಕೆಗೆ ಪಾತ್ರವಾದ ಕಡಲತೀರದ ಪುಟ್ಟಗ್ರಾಮ ಕಂಚುಗೋಡು ಮಹಾಪ್ರತಿಭೆಗಳ ಕೇಂದ್ರ ಸ್ಥಾನವಾಗಿದ್ದು, ಖಾರ್ವಿ ಸಮಾಜದ ಅದ್ಬುತ ಪ್ರತಿಭೆಗಳು ಈ ಊರಿನ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ ವಿವಿಧ ಕಲಾ ಪ್ರಕಾರಗಳಾದ ಸಂಗೀತಾ, ಸಾಹಿತ್ಯ, ಯಕ್ಷಗಾನ, ಹಾಡುಗಾರಿಕೆ, ಚಿತ್ರಕಲೆ ಹೀಗೆ ಎಲ್ಲಾ ಕಲಾಪ್ರಕಾರಗಳಲ್ಲಿಯೂ ಈ ಊರಿನ ಪ್ರತಿಭೆಗಳು ಮಿಂಚುತ್ತಿದ್ದಾರೆ. ಇಲ್ಲಿನ ಪ್ರತಿಯೊಂದು ಖಾರ್ವಿ ಸಮಾಜದ ಮನೆಯಲ್ಲೂ ಅದ್ಭುತ ಕಲಾ ಪ್ರತಿಭೆಗಳು ಹುಟ್ಟಿಕೊಂಡಿದ್ದಾರೆ ಇಂತಹ ಕಲಾಪ್ರತಿಭೆಗಳಿಂದ ತುಂಬಿ ತುಳುಕಾಡುತ್ತಿರುವ ಕಂಚುಗೋಡಿನಲ್ಲಿ ಶ್ರೀ ರಾಮಮಂದಿರದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿರುವುದು ಸಂಭ್ರಮ ಪಡುವ ಸಂಗತಿಯಾಗಿದೆ.

ಕಂಚುಗೋಡು ಮತ್ತೊಂದು ಅತಿಶಯ ಮತ್ತು ಐತಿಹಾಸಿಕ ಕ್ಷಣಗಳ ಅನಾವರಣದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿ ನಿಂತಿದೆ. ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಂಚುಗೋಡು ರಾಮ ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಮತ್ತು ಸಮುದ್ರ ಪೂಜೆ ನೀರಾಜನದ ಅಭೂತಪೂರ್ವ ಕಾರ್ಯಕ್ರಮಕ್ಕೆ ಕಂಚುಗೋಡು ಗ್ರಾಮ ಸಾಕ್ಷಿಯಾಗಲಿದೆ. ಈ ಅಭೂತಪೂರ್ವ ಕಾರ್ಯಕ್ರಮಗಳ ಕ್ಷಣಗಣನೆಯ ಸುಸಂದರ್ಭದಲ್ಲಿ ಶ್ರೀ ರಾಮ ಮಂದಿರದ ಸ್ಥಾಪನೆ ಮತ್ತು ನಡೆದು ಬಂದ ದಾರಿಯ ಒಂದಿಷ್ಟು ವಿಚಾರಗಳನ್ನು ಇಲ್ಲಿ ಮೆಲುಕು ಹಾಕೋಣ.

ಸರಿ ಸುಮಾರು ಐವತ್ತು ವರ್ಷಗಳಿಗೆ ಸರಿಯಾಗಿ ಅಂದರೆ 1974 ರಲ್ಲಿ ಕಂಚುಗೋಡು ಗ್ರಾಮದಲ್ಲಿ ಸಮಾನ ಮಾನಸ್ಕರೆಲ್ಲ ಒಂದಾಗಿ ಒಂದು ಯುವಕ ಸಂಘವನ್ನು ಹುಟ್ಟುಹಾಕಿದರು. ಅಲ್ಲಿ ಭವಿತವ್ಯದ ದೂರದೃಷ್ಟಿ ಚಿಂತನೆಯ ಮಹತ್ತರವಾದ ಧೇಯ್ಯೋದ್ದೇಶಗಳಿದ್ದವು. ಈ ಸಂಘವು ಊರಿನಲ್ಲಿ ಹಲವಾರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಚೇತೋಹಾರಿ ಕೈಂಕರ್ಯದಲ್ಲಿ ವಿಧೇಯಿಸಿಕೊಂಡಿತ್ತು. ಹೊಸ ತಲೆಮಾರಿನ ಯುವಕರು ಈ ಸಂಘಕ್ಕೆ ಬೆನ್ನುಲುಬಾಗಿ ನಿಂತುಕೊಂಡು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿ ಏಕಾದಶಿಯಂದು ಶ್ರೀ ರಾಮನ ಭಾವಚಿತ್ರವನ್ನು ಇಟ್ಟು ಭಜನೆ ಮಾಡುವ ಪರಿಪಾಠ ನಿರಂತರವಾಗಿ ನಡೆದುಕೊಂಡು ಬಂತು. ಕಾಲಕ್ರಮೇಣ ಊರವರು ಸದ್ಭಕ್ತರ, ದಾನಿಗಳ ನೆರವಿನಿಂದ ಹಂಚಿನ ಮಾಡಿನ ಶ್ರೀ ರಾಮಮಂದಿರ ನಿರ್ಮಾಣ ಮಾಡಿದರು ರಾಮಮಂದಿರ ನಿರ್ಮಾಣವಾದ ದಶಮಾನೋತ್ಸವದ ಶುಭ ಗಳಿಗೆಯಲ್ಲಿ ನೂತನ ಮುಖ ಮಂಟಪವನ್ನು ನಿರ್ಮಿಸಲಾಯಿತು. ಪರಮಪೂಜ್ಯ ಶ್ರೀ ಬಾಳೆಕುದ್ರು ಮಠಾಧೀಶರ ಅಮೃತ ಹಸ್ತದಿಂದ ಈ ಮುಖ ಮಂಟಪವನ್ನು ಉದ್ಘಾಟಿಸಲಾಯಿತು. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಏಕಾದಶಿ ಭಜನಾ ಕಾರ್ಯಕ್ರಮವಲ್ಲದೇ ವಾರ್ಷಿಕ ಭಜನಾ ಸಪ್ತಾಹ ಕೂಡಾ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಊರ ಪರವೂರ ಹಲವು ಭಜನಾ ಮಂಡಳಿಯವರು ಈ ವಾರ್ಷಿಕ ಭಜನಾ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾಲಕ್ರಮೇಣ ಹಿರಿಯರು ನೂತನವಾಗಿ ದೇವಸ್ಥಾನ ನಿರ್ಮಾಣದ ಚಿಂತನೆ ಮಾಡಿರುತ್ತಾರೆ. ಆದರೆ ಮೀನುಗಾರಿಕಾ ಆದಾಯದ ಕೊರತೆ ಹಾಗೂ ದೇವಸ್ಥಾನಕ್ಕೆ ಯಾವುದೇ ಆದಾಯದ ಮೂಲ ಇಲ್ಲದಿರುವುದರಿಂದ ದೇವಸ್ಥಾನದ ನಿರ್ಮಾಣ ಕಷ್ಟ ಸಾಧ್ಯವಾಯಿತು. ತದನಂತರ ಈ ವಿಚಾರವನ್ನು ಮನಗಂಡಂತಹ ಹೊಸ ತಲೆಮಾರಿನ ತರುಣರು ಮತ್ತು ಸಮಸ್ತ ಭಕ್ತಾಧಿಗಳ ಸಹಕಾರದೊಂದಿಗೆ 2003 ರಲ್ಲಿ ನೂತನ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಲ್ಪಟ್ಟು, 2006ರ ಶುಭಕುಂಭ ಲಗ್ನ ಸುಮುಹೂರ್ತದಲ್ಲಿ ದಕ್ಷಿಣಾಮ್ನಯ ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಅಮೃತಮಯ ಹಸ್ತದಿಂದ ನೆರವೇರಲ್ಪಟ್ಟು, ಭಕ್ತ ಜನರ ಕನಸು ನನಸಾಯಿತು.

ಪ್ರಸ್ತುತ ಶ್ರೀರಾಮ ದೇವಸ್ಥಾನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು 2024ರ ಎಪ್ರಿಲ್‌ನಲ್ಲಿ ಸುವರ್ಣ ಸಂಭ್ರಮದ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಮಹೋತ್ಸವವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ಸ್ವಾಮಿಜೀ, ಪೇಜಾವರ ಮಠ, ಉಡುಪಿ ಹಾಗೂ ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ನರಸೀಪುರ ಇವರುಗಳ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಡಾ.ಎ.ಚನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಇವರ ನೇತೃತ್ವದಲ್ಲಿ ಹಾಗೂ ಕ್ಷೇತ್ರ ಪುರೋಹಿತರಾದ ರಾಘವೇಂದ್ರ ಭಟ್ ಕಿರಿಮಂಜೇಶ್ವರ ಇವರ ಪೌರೋಹಿತ್ಯದಲ್ಲಿ ಶ್ರೀರಾಮ ದೇವಸ್ಥಾನದಲ್ಲಿ ಸಪ್ತಾಹ ಭಜನಾ ಮಹೋತ್ಸವ, ಸೀತಾರಾಮಚಂದ್ರ ಕಲ್ಯಾಣೋತ್ಸವ, ಸಾಗರೇಶ್ವರ ಪೂಜೆ, ಧಾರ್ಮಿಕ ಸಭೆ, ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾ ಅನ್ನಸಂತರ್ಪಣೆ ಅಷ್ಟ ದಿನಗಳ ಪರ್ಯಂತ ನಡೆಯಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮಗಳ ಯಶಸ್ವಿಗಾಗಿ ಕಂಚಗೋಡು ಖಾರ್ವಿ ಸಮಾಜದ ಸಮಾಜ ಸೇವಕ, ದಿಟ್ಟ ಹೋರಾಟಗಾರ, ಮೀನುಗಾರ ಮುಖಂಡ ಹಾಗು ಶ್ರೀರಾಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು ಕಂಚುಗೋಡು ನಾಗೇಶ್ ಖಾರ್ವಿ ಮತ್ತು ಯುವ ಮುಂದಾಳು, ಸುವರ್ಣ ಮಹೋತ್ಸವ ಅಧ್ಯಕ್ಷರು ಚೌಕಿ ಸಂತೋಷ್ ಖಾರ್ವಿ, ಶ್ರೀರಾಮ ದೇವಸ್ಥಾನ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಶೋಧನಾರಾಯಣ ಖಾರ್ವಿ ನೇತೃತ್ವದಲ್ಲಿ ಹಾಗೂ ಪದಾಧಿಕಾರಿ, ಸರ್ವ ಸದಸ್ಯರು, ಊರಿನ ಸಮಾಜ ಭಾಂಧವರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಅಭೂತಪೂರ್ವ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ರಾಮ ಮಂದಿರ ಸುವರ್ಣ ಮಹೋತ್ಸವ ಸಮಿತಿಯವರು ಸಮಾಜದ ಸರ್ವರ ತನು ಮನ ಧನ ಸಹಕಾರವನ್ನು ಆಪೇಕ್ಷಿಸಿದ್ದಾರೆ. ಶ್ರೀ ರಾಮ ಮಂದಿರ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಜರುಗುವ ಸಂದರ್ಭದಲ್ಲಿ ಸಮಿತಿಯವರು ಮುಂದಿನ ಯೋಜನೆಗಳ ಬಗ್ಗೆ ಶುಭಾರಂಭಕ್ಕೆ ನಾಂದಿ ಹಾಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತದೆ.

ಸುಧಾಕರ ಖಾರ್ವಿ
www.kharvionline.com

Leave a Reply

Your email address will not be published. Required fields are marked *