ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ಸೃಷ್ಟಿಸುತ್ತಿರುವ ಹಲವು ಅಧ್ವಾನಗಳ ನಡುವೆ ಶಾಕಿಂಗ್ ನ್ಯೂಸ್ ಒಂದು ಬಿತ್ತರವಾಗಿದ್ದು,ಕುಂದಾಪುರ ಕೊಂಕಣಿ ಖಾರ್ವಿ ಸಮಾಜದೊಂದಿಗೆ ಬಹಳ ಆಪ್ತತೆಯ ಮತ್ತು ಪೂಜನೀಯ ಸ್ಥಾನವನ್ನು ಗಳಿಸಿದ್ದ ಕುಂದಾಪುರ ಚಿಕ್ಕಮ್ಮನ ಸಾಲು ರಸ್ತೆಯ ನಾಲ್ಕುನೂರು ವರ್ಷಗಳ ಹಳೆಯದಾದ ಬೃಹತ್ ಆಲದ ಮರವೊಂದು ಧಾರಾಶಾಹಿಯಾಗಿದೆ.
ಈ ಬೃಹತ್ ಆಲದ ಮರ ಕೊಂಕಣಿ ಖಾರ್ವಿ ಸಮಾಜದ ಪಾಲಿಗೆ ಪೂಜನೀಯವಾಗಿದ್ದು, ಸಮಾಜದ ವ್ಯಕ್ತಿಗಳ ಅಂತಿಮ ಯಾತ್ರೆಯು ಪರಮಾತ್ಮನ ನಾಮಸ್ಮರಣೆಯೊಂದಿಗೆ ಸಾಗುವಾಗ ಈ ಆಲದ ಮರದ ಬಳಿ ಕ್ಷಣಕಾಲ ಅಂತಿಮ ಯಾತ್ರೆಯ ಚಟ್ಟವನ್ನು ಕೆಳಗೆ ಇರಿಸಿ ಮುಂದೆ ಸಾಗುವ ಸಂಪ್ರದಾಯವಿದೆ
ಈ ಸಂಪ್ರದಾಯವು ಅನಾದಿಕಾಲದಿಂದಲೂ ಅವಿಚಿನ್ನ ಮತ್ತು ಅಭಾಧಿತವಾಗಿ ನಡೆದುಕೊಂಡು ಬಂದ್ದಿದು, ಶವಯಾತ್ರೆಯ ಚಟ್ಟವನ್ನು ಕೆಳಕ್ಕೆ ಇರಿಸುವಾಗ ಮತ್ತು ಮೇಲೆ ಎತ್ತುವಾಗ ಮೂರು ಬಾರಿ ಗೋವಿಂದ ನಾಮಸ್ಮರಣೆ ಮಾಡುತ್ತಾರೆ.
ಭಾರತೀಯ ಪುರಾಣ ಮತ್ತು ಸಂಸ್ಕೃತಿಯಲ್ಲಿ ಆಲದ ಮರದ ಪಾತ್ರ ಮಹತ್ವದ್ದು ಆಲದ ಮರದ ಬುಡದಲ್ಲಿ ಧರ್ಮಸಮ್ಮತವಾದ ಅನೇಕ ಸಂಪ್ರದಾಯಗಳು ಬೆಸೆದುಕೊಂಡಿದ್ದು, ಮೃತಪಟ್ಟ ವ್ಯಕ್ತಿಯ ಶರೀರ ಆಲದ ಮರದ ಬಳಿ ಇರಿಸುವುದರಿಂದ ಆತನಿಗೆ ಸದ್ಗತಿ ಪ್ರಾಪ್ತಿಯಾಗುವುದು ಎಂಬ ನಂಬಿಕೆಯೂ ಅವ್ಯಕ್ತವಾಗಿದೆ. ಕುಂದಾಪುರ ಪರಿಸರದ ಕೊಂಕಣಿ ಖಾರ್ವಿ ಸಮಾಜದ ವ್ಯಕ್ತಿಗಳು ಸತ್ತಾಗ ಮೃತಶರೀರವನ್ನು ಭಗವಂತನ ನಾಮಸ್ಮರಣೆ ಮತ್ತು ಭಜನೆಯೊಂದಿಗೆ ಸ್ಮಶಾನಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ಪವಿತ್ರ ಸಂಪ್ರದಾಯವಿದೆ. ಈ ಸಂಪ್ರದಾಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ
ಕಳೆದ ನಾನೂರು ವರ್ಷಗಳಿಂದ ಚಂಡಮಾರುತ, ಕುಂಭದ್ರೋಣ ಮಳೆಗೂ ಜಗ್ಗದೇ ಅಜೇಯವಾಗಿ ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತಿದ್ದ ಮಹಾವೃಕ್ಷ ಆಲದ ಮರ ಇಂದು ಬಿರುಗಾಳಿ ಮಳೆಗೆ ನೆಲಕ್ಕೆ ಉರುಳಿದೆ.
ಈ ಹಿಂದೆ ಖಾರ್ವಿ ಸಮಾಜದ ಮೃತ ವ್ಯಕ್ತಿಗಳ ಶವಯಾತ್ರೆ ಸಾಗುವಾಗ ಚಿಕ್ಕಮ್ಮನ ಸಾಲು ರಸ್ತೆಯ ಮೂರು ಕಡೆ ನಿಲ್ಲುತ್ತಿತ್ತು ಮೊದಲನೆಯದಾಗಿ ಅಂಚೆ ಕಚೇರಿಯ ಬಳಿ ಸೋನ್ಸ್ ಮನೆಯ ಹತ್ತಿರದವಿದ್ದ ಆಲದ ಮರದ ಬಳಿ, ಎರಡನೇಯದಾಗಿ ಮೊಗವೀರ ಭವನದ ಬಳಿ ಇರುವ ರಾಮಮಂದಿರ ಸಮೀಪದಲ್ಲಿದ್ದ ಆಲದ ಮರ ಮತ್ತು ಈಗ ಧಾರಾಶಾಹಿಯಾಗಿರುವ ಅಮ್ಮರಸನ ಕಂಪೌಂಡ್ ಇರುವ ಆಲದ ಮರ. ಮೊದಲ ಎರಡು ಆಲದ ಮರಗಳು ತೆರವುಗೊಂಡ ಬಳಿಕ ಅಮ್ಮರಸನ ಕಂಪೌಂಡ್ ಬಳಿ ಇದ್ದ ಈ ಬೃಹತ್ ಆಲದ ಮರದ ಬಳಿ ಅಂತಿಮ ಯಾತ್ರೆ ನಿಲ್ಲುತ್ತಿತ್ತು. ಆದರೆ ಈಗ ಈ ಆಲದ ಮರ ಕೂಡಾ ಉರುಳಿದೆ ನಿಜಕ್ಕೂ ಬೇಸರದ ಸಂಗತಿ ಪೂಜನೀಯ ಸ್ಥಾನದಲ್ಲಿದ್ದ ನೈಸರ್ಗಿಕ ಹೆಗ್ಗುರುತೊಂದು ನಾಶವಾದರೆ, ಇತಿಹಾಸ , ಸಂಪ್ರದಾಯ ಮತ್ತು ಪರಿಸರಗಳ ನಡುವಿನ ಅವಿನಾಭಾವ ಬೆಸುಗೆಯನ್ನು ಮರಳಿ ಪಡೆಯುವುದು ಸುಲಭವಲ್ಲ. ಈ ಬೆಸುಗೆ ಮುಂದುವರಿಯಲು ಮತ್ತು ಪರಿಸರಪೂರಕ ಧಾರ್ಮಿಕ ಸಂಪ್ರದಾಯ ವ್ಯವಸ್ಥೆಯನ್ನು ಉರ್ಜೀತಗೊಳಿಸಲು ಅದೇ ಸ್ಥಳದಲ್ಲಿ ಮತ್ತೊಂದು ಆಲದ ಸಸ್ಯವನ್ನು ನೆಟ್ಟು ಬೆಳೆಸಬೇಕಾಗಿದೆ.
ವೃಕ್ಷಪರಿಸರದೊಂದಿಗೆ ನಿರಂತರ ಸಂಬಂಧದಿಂದ ನಮ್ಮಲ್ಲಿ ಅದರೆಡೆಗಿನ ಪವಿತ್ರ ಗ್ರಹಿಕೆ ಚೈತನ್ಯಪೂರ್ಣವಾಗಿ ಮೂಡುತ್ತದೆ. ನಾವು ಪ್ರಕೃತಿಯನ್ನು ಶ್ರಧ್ಧಾಪೂವರ್ಕವಾಗಿ ಆರಾಧಿಸುವುದರಿಂದ ನವಿರಾದ ನೀತಿನೇಮಗಳನ್ನು ಬೆಳೆಸಿಕೊಳ್ಳುತ್ತೇವೆ ಧಾರಾಶಾಹಿಯಾಗಿರುವ ಆಲದ ಮರ ಮತ್ತು ಕೊಂಕಣಿ ಖಾರ್ವಿ ಸಮಾಜದ ಸಂಬಂಧಗಳು ಈ ಉದಾತ್ತ ಚಿಂತನೆಯಲ್ಲಿ ಪರಮ ಆಪ್ತತೆಯ ನೆಲೆಯಲ್ಲಿ ಬೆಸೆದುಕೊಂಡಿದೆ.
ವರದಿ: ಸುಧಾಕರ ಖಾರ್ವಿ
www.kharvionline.com
ಪ್ರಕೃತಿಯನ್ನು ಪ್ರೀತಿಸಿ, ಹಿಂತಿರುಗಿಸುತ್ತದೆ…….www.kharvionline.com