ಹಾಯಿದೋಣಿ: ಈಜಲರಿಯದವ ಸಮುದ್ರದಲ್ಲಿ ಜೈಸಲಾರ

ಈಸಬೇಕು; ಇದ್ದು ಜೈಸಬೇಕು ಎಂಬ ಗಾದೆಯೊಂದಿದೆ. ಮನುಷ್ಯನನ್ನು ಹೊರತುಪಡಿಸಿ ಪಡಿಸಿ ಬೇರೆಲ್ಲಾ ಪ್ರಾಣಿಗಳು ಹುಟ್ಟಿನಿಂದಲೇ ಈಜಲು ಕಲಿಯುತ್ತವೆ. ಮನುಷ್ಯ ಮಾತ್ರ ಉದ್ದೇಶಪೂರ್ವಕವಾಗಿ ಈಜಲು ಕಲಿಯಬೇಕು. ಈಜಿಪ್ಟ್ ನಾಗರಿಕತೆಯ ಕೆಲವು ಚಿತ್ರಲಿಪಿಯಲ್ಲಿ ಈಜಿನ ಕುರಿತಾದ ಚಿತ್ರಗಳಿದ್ದು ಸುಮಾರು ಕ್ರಿ.ಪೂ. 2500 ವರ್ಷಗಳ ಹಿಂದೆಯೇ ಈಜು ಸಾಮಾನ್ಯ ವಿಚಾರವಾಗಿತ್ತು ಎಂಬುದು ತಿಳಿಯುತ್ತದೆ. ಸಿಂಧೂ ನದಿ ನಾಗರಿಕತೆಯ ಕಾಲದಲ್ಲಿ ಕಂಡುಬಂದ ಈಜುಕೊಳಗಳು ಇದಕ್ಕೆ ಇನ್ನಷ್ಟು ಸಾಕ್ಷಿಯನ್ನು ಒದಗಿಸುತ್ತದೆ. ಹೆಚ್ಚಿನವರು ಈಜುಕೊಳಗಳಲ್ಲಿ, ನದಿಗಳಲ್ಲಿ, ಕೆರೆಗಳಲ್ಲಿ, ಸಮುದ್ರಗಳಲ್ಲಿ ಈಜು ಕಲಿಯುತ್ತಾರೆ. ಕೆಲವರು ಗುರುಗಳ ಸಹಾಯದಿಂದ ಕಲಿತರೆ, ಇನ್ನು ಕೆಲವರು ಏಕಲವ್ಯನಂತೆ, ತಮಗೆ ತಾವೇ ಗುರು ಆಗುತ್ತಾರೆ. ಆದರೆ ಈಜನ್ನು ಗುರುವಿನ ಸಹಾಯವಿಲ್ಲದೆ ಕಲಿಯುವುದು ಅತ್ಯಂತ ಅಪಾಯಕಾರಿ. ಆ ಕಾರಣದಿಂದಲೇ ನಮ್ಮ ಕರಾವಳಿಯಲ್ಲಿ ಪ್ರತಿವರ್ಷ ಸಮುದ್ರ, ನದಿ, ಕೆರೆಗಳಲ್ಲಿ ಈಜಲು ಹೋಗಿ ನೂರಾರು ಜನರು ಸಾಯುವುದನ್ನು ಕಂಡಿರಬಹುದು. ನೀರು ಕಂಡಾಗ ಮನಸ್ಸಿಗೆ ಎಷ್ಟು ಸಂತಸವಾಗುವುದೋ, ನೀರು ಅಷ್ಟೇ ಅಪಾಯಕಾರಿ. ಸರಿಯಾದ ಮಾಹಿತಿಯಿಲ್ಲದೆ, ಸುರಕ್ಷಾ ವಿಧಾನಗಳನ್ನು ಪಾಲಿಸದೆ ನೀರಿಗಿಳಿದರೆ, ಖುಷಿ ಕೊಡುವ ನೀರೇ ಜವರಾಯನಂತೆ ಉಸಿರನ್ನು ನಿಲ್ಲಿಸಬಹುದು.

ದೇವಾಲಯದ ಪುಷ್ಕರಣಿಗಳಲ್ಲಿ,‌ ಸಾರ್ವಜನಿಕ ಕೆರೆಗಳಲ್ಲಿ, ಈಜುಕೊಳಗಳಲ್ಲಿ ನೀರಿಗಿಳಿಯುವವರ ಮೇಲೆ ನಿಗಾ ಇಡಲಾಗುತ್ತದೆ; ಜೀವ ರಕ್ಷಕರು ಸದಾ ಎಚ್ಚರಿಸುತ್ತಿರುತ್ತಾರೆ; ಎಚ್ಚರಿಕೆಯ ನಾಮಫಲಕ ಅಳವಡಿಸಲಾಗಿರುತ್ತದೆ. ಎಚ್ಚರಿಕೆಯ ನಿಯಮವನ್ನು ಸರಿಯಾಗಿ ಪಾಲಿಸಿದರೆ ಅಪಾಯದ ಸಾಧ್ಯತೆಯು ಕಡಿಮೆಯಾಗುವುದು. ಈಜುಕೊಳಗಳ ನಿರ್ವಾಹಕರು ಸುರಕ್ಷತೆಯ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಆದರೆ ನದಿ, ಸಮುದ್ರಗಳಿಗೆ ಬೇಲಿ ಹಾಕಲು ಸಾಧ್ಯವೇ? ಇವುಗಳ ಗಡಿಯುದ್ದಕ್ಕೂ ಪಹರೆ ಕಾಯಲು ಸಾಧ್ಯವೇ? ಜನರು ಸೇರುವ ಸ್ಥಳಗಳಲ್ಲಿ ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಿದರೆ, ಯಾರು ಇಲ್ಲದ ಜಾಗಗಳಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯೇ?

ನದಿಯೆಂದರೆ ನಿಂತ ನೀರಲ್ಲ; ಸದಾ ಹರಿಯುತ್ತಿದ್ದರೆ ಮಾತ್ರ ನದಿಯೆಂದೆನಿಸಿಕೊಳ್ಳುವುದು. ನದಿಯಲ್ಲಿ ನೀರು ಏಕಪ್ರಕಾರವಾಗಿ ಹರಿಯುವುದಿಲ್ಲ. ಮಳೆಗಾಲದಲ್ಲಿ ನದಿಯ ರಭಸ ಹೆಚ್ಚು‌. ನದಿಯ ಆಳವೂ ವ್ಯತ್ಯಯಗೊಳ್ಳುತ್ತದೆ. ಕೆಲವು ಬಾರಿ ಬೆಳಕಿನ ವಕ್ರೀಭವನದ ಕಾರಣದಿಂದ ನೀರಿನಲ್ಲಿ ಆಳ ಕಡಿಮೆಯಾದಂತೆ ಭಾಸವಾಗುತ್ತದೆ. ಇದನ್ನು ಅರಿಯದೆ ಕೆಲವರು ನೀರಿಗಿಳಿಯುತ್ತಾರೆ. ನದಿಯಲ್ಲಿ ಹೊಂಡ ಇರುವ ಸ್ಥಳದ ಅರಿವಿಲ್ಲದೆಯೂ ಕೆಲವರು ಮುಳುಗುವವರಿದ್ದಾರೆ. ನೀರಿನಾಳದ ಕೆಸರಿನ ದಂಡೆಯ ಅರಿವಿಲ್ಲದೆಯೂ ಪ್ರಾಣ ಕಳೆದುಕೊಳ್ಳುವವರಿದ್ದಾರೆ. ಹಾಗಾಗಿ ನದಿಯು ಈಜು ಕಲಿಯಲು ಸುರಕ್ಷಿತ ಸ್ಥಳವಲ್ಲ. ನದಿಯ ಆಳ ಅಲಗದ ಅರಿವಿಲ್ಲದವರಂತಲೂ ನದಿಯ ಬಳಿ ಸುಳಿಯಲೂಬಾರದು. ಸಮುದ್ರದಲ್ಲಿ ಇಳಿತವಿರುವಾಗ ಸಮುದ್ರದ ಕಡೆ ನದಿ ಹರಿಯುವ ವೇಗವೂ ಹೆಚ್ಚಿರುತ್ತದೆ. ಆಗ ನೀರಿಗಿಳಿದವರು ನದಿಯ ಮೂಲಕ ಸಮುದ್ರಪಾಲಾಗುವ ಸಾಧ್ಯತೆಯೂ ಇದೆ. ಕೆಲವರು ನದಿಯಲ್ಲಿರುವ ಬಂಡೆಗಳ ಬಗ್ಗೆ ಗೊತ್ತಿಲ್ಲದೆ, ಡೈವ್ ಮಾಡಿ ತಲೆ ಹೊಡೆದುಕೊಂಡವರೂ ಇದ್ದಾರೆ.

ನದಿಯಂತೆಯೇ, ಸಮುದ್ರದಲ್ಲಿ ಈಜುವವರು ಮೈಯೆಲ್ಲಾ ಕಣ್ಣಾಗಿರಬೇಕು. ಸಮುದ್ರವು ಯಾರ ಕಲ್ಪನೆಗೂ ಸಿಗದು. ವಾತಾವರಣದ ಉಷ್ಣತೆ, ಬೀಸುವ ಗಾಳಿ, ಸಂಭವಿಸುವ ಅಮಾವಾಸ್ಯೆ, ಹುಣ್ಣಿಮೆ, ಗ್ರಹಣಗಳು ಎಲ್ಲವೂ ಸಮುದ್ರದ ಪ್ರವಾಹದ ಮೇಲೆ ಪ್ರಭಾವ ಬೀರುತ್ತದೆ. ನಿನ್ನೆಯಂತೆ ಇವತ್ತು ಇರಲ್ಲ; ಈಗಿನಂತೆ ಮತ್ತೊಂದು ಕ್ಷಣದಲ್ಲಿ ಇರದು. ಕ್ಷಣಕ್ಷಣಕ್ಕೂ ಬದಲಾಗುವ ಸಮುದ್ರ ತನ್ನ ಪೂರ್ಣ ವಿಚಾರಗಳನ್ನು ಇನ್ನೂ ಮನುಷ್ಯನಿಗೆ ಬಿಟ್ಟು ಕೊಟ್ಟಿಲ್ಲ. ದಡದಲ್ಲಿ ನಿಂತು ನೋಡುವಾಗ ಕಾಣಿಸದ ಸಮುದ್ರ ಪ್ರವಾಹಗಳು ನೀರಿಗೆ ಇಳಿದಾಗ ಅನುಭವಕ್ಕೆ ಬರುತ್ತದೆ. ಬಂಡೆಯ ಸಮೀಪ ಈಜುವಾಗ ಅಪಾಯಕಾರಿ ಅಲೆಗಳು ಯಾವ ಕ್ಷಣದಲ್ಲೂ, ನಮ್ಮನ್ನು ಎತ್ತಿ ಬಂಡೆಗೆ ಅಪ್ಪಳಿಸಿ ಬಿಡಬಹುದು. ಮಳೆಗಾಲದ ತೆಂಕಣಗಾಳಿಯಿಂದ ಕೆರಳಿ, ಕದಡಿ ಹೋಗುವ ನೀರಿನಾರ್ಭಟವಿರುವಾಗ ನೀರಿಗೆ ಇಳಿಯದಿರುವುದೇ ಉತ್ತಮ. ಮಳೆಗಾಲದಲ್ಲಿ ಅತ್ಯಂತ ಬಿರುಸುಗೊಳ್ಳುವ ಸಮುದ್ರದ ತಳ ಕದಡಿ ನೀರು ದಪ್ಪ ಆಗಿರುತ್ತದೆ. ಈ ನೀರಿನಲ್ಲಿ ಈಜುವುದು ಸುಲಭದ ಮಾತಲ್ಲ. ರೇ ಫಿಶ್, ಶಾರ್ಕ್, ಜಲ್ಲಿ ಫಿಶ್ ಮುಂತಾದವುಗಳಿಂದ ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸಬಹುದು. ಇತ್ತೀಚಿಗೆ ಉತ್ತರ ಕನ್ನಡದ ನದಿಯೊಂದರಲ್ಲಿ ಮೊಸಳೆಯೊಂದು ನದಿಯ ಮೂಲಕ ಸಮುದ್ರ ಸೇರಿ, ಕೈರಂಪಣಿ ಬಲೆಗೆ ಸಿಕ್ಕರುವ ಉದಾಹರಣೆ ಇನ್ನೂ ಹಸಿರಾಗಿಯೇ ಇದೆ. ಒಂದು ವೇಳೆ ಇಂತಹ ಪ್ರಾಣಿಗಳು ದಾಳಿ ಮಾಡಿದರೆ ಹೇಗಿರಬಹುದು, ಯೋಚಿಸಿ….! ಅನನುಭವಿ ಈಜುಗಾರರು ಸಮುದ್ರದ ಬಲೆಯ ಕಲ್ಪನೆ ಇಲ್ಲದೆ, ಮೀನುಗಾರರು ಬೀಸಿರುವ ಬಲೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಉದಾಹರಣೆಯೂ ಇದೆ. ನದಿ ಸಮುದ್ರಕ್ಕೆ ಸೇರುವ ಸ್ಥಳದಲ್ಲಿ ನೀರಿನ ಸೆಳೆತ ಹೆಚ್ಚು. ನದಿಗಳು ಸೆಳೆದು ತರುವ ಮಣ್ಣು ಈ ಭಾಗದ ಸಮುದ್ರದಲ್ಲಿ ಶೇಖರಣೆಗೊಳ್ಳುವುದರಿಂದ ತೆರೆಗಳ ಆರ್ಭಟವೂ ಹೆಚ್ಚು. ಸಮುದ್ರದಲ್ಲಿ ಭರತ ಇದ್ದಾಗ ಸಮುದ್ರದ ನೀರು ನದಿಯತ್ತ ಚಲಿಸುತ್ತದೆ; ಇಳಿತ ಇದ್ದಾಗ ನದಿಯ ನೀರು ಸಮುದ್ರದ ಕಡೆ ಚಲಿಸುತ್ತದೆ. ಈ ಕಾರಣದಿಂದ ಅಳಿವೆ ಸಮೀಪ ಈಜಲು ಹೋದ ಅದೆಷ್ಟೋ ಮಂದಿ ಕೊಚ್ಚಿಕೊಂಡು ಹೋಗಿದ್ದಿದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಚಂದ್ರನ ಆಕರ್ಷಣೆಯಿಂದ ಸಮುದ್ರದ ನೀರು ಉಕ್ಕುತ್ತದೆ. ಆ ಸಮಯದಲ್ಲಿ ಸಮುದ್ರ ಲಗಾಮು ಇಲ್ಲದ ಕುದುರೆಯಂತೆ ಹುಚ್ಚೆದ್ದು ಕುಣಿಯಲಾರಂಭಿಸುತ್ತದೆ. ಇದರ ಕಲ್ಪನೆ ಇಲ್ಲದವರನ್ನು ಸಮುದ್ರ ಸ್ವಾಹ ಮಾಡಿ ಬಿಡುವುದು.

ಸಾಮಾನ್ಯವಾಗಿ ಕೆರೆ, ಈಜುಕೊಳಗಳಲ್ಲಿ ಈಜುತ್ತಾ ಆಯಾಸವಾದರೆ ಸಮೀಪದ ದಂಡೆಯನ್ನು ಹಿಡಿದು ಆಯಾಸ ಬಗೆಹರಿಸಿಕೊಳ್ಳುತ್ತಾರೆ. ಸಮುದ್ರದಲ್ಲಿ ಈಜಿಕೊಂಡು ಬಹುದೂರ ಹೋದವನಿಗೆ, ಹಿಂತಿರುಗಿ ಹೋಗಲು ತನ್ನಲ್ಲಿರಬೇಕಾದ ಬಲದ ಪರಿಕಲ್ಪನೆಯಿರಬೇಕು. ಈಜುಕೊಳದಲ್ಲಿ ಅತ್ಯುತ್ತಮ ಈಜುಗಾರರಾಗಿರುವ ಎಷ್ಟೋ ಮಂದಿ ಸಮುದ್ರದಲ್ಲಿ ಈಜಲು ಸಾಧ್ಯವಾಗದೆ ಕೈಕಾಲು ಬಿಟ್ಟಿದ್ದಿದೆ. ಸಮುದ್ರದಲ್ಲಿ ಈಜುವ ಜೊತೆಗೆ ತೇಲುವ ವಿದ್ಯೆಯನ್ನೂ ಕಲಿಯಬೇಕು. ಕೈ ಕಾಲು ಬಡಿಯದೆ ನಿಶ್ಚಲವಾಗಿ ಶವಾಸನ ಹಾಕಿ ಮಲಗುವ ವಿದ್ಯೆ ಸಿದ್ಧಿಸಿಕೊಂಡರೆ, ಸಮುದ್ರದಲ್ಲಿ ತುಂಬಾ ಹೊತ್ತಿನವರೆಗೆ ಈಜಿಕೊಂಡು ಇರಲು ಸಾಧ್ಯ.

ಈಜು ಗೊತ್ತಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಎಷ್ಟೋ ಜೀವಗಳು ನಷ್ಟವಾಗುತ್ತವೆ. ಈ ಕಾರಣಕ್ಕಾದರೂ ಎಲ್ಲರೂ ಈಜು ಕಲಿಯಬೇಕು. ಹಾಗಂತ ಈಜು ಕಲಿಯಲು ಹಿರಿಯರ, ತರಬೇತುದಾರರ ಸಹಾಯ, ಸಲಹೆ, ಸೂಚನೆಗಳಿಲ್ಲದೆ ನೀರಿಗೆ ಇಳಿಯಬಾರದು. ಈಜಿನಿಂದ ಸಿಗುವ ವ್ಯಾಯಾಮ ಸರ್ವ ಕಾಲಕ್ಕೂ ಮಾನ್ಯ. ಬೇರೆಲ್ಲ ವ್ಯಾಯಾಮಗಳಂತೆ ಈಜಿನಲ್ಲಿ ನಮ್ಮ ಕೀಲುಗಳ ಮೇಲೆ ಒತ್ತಡ ಬೀಳದಿರುವ ಕಾರಣ ಗಂಟುಗಳ ಮುಳೆ ಹೆಚ್ಚು ಸವೆಯುವುದಿಲ್ಲ. ಈಜಿನಲ್ಲಿ ಯೋಗವೂ ಇದೆ, ಪ್ರಾಣಾಯಾಮವೂ ಇದೆ. ಅರವತ್ತನಾಲ್ಕು ವಿದ್ಯೆಗಳಲ್ಲಿ ಒಂದಾಗಿರುವ ಈಜನ್ನು ಕಲಿಯೋಣ, ಗೊತ್ತಿಲ್ಲದವರಿಗೆ ಕಲಿಸೋಣ.

ನಾಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *