ಮುಂಚೆ ಮಳೆಗಾಲವೆಂದರೆ ಸಂತಸಕ್ಕಿಂತ ಸಂಕಟವೇ ಹೆಚ್ಚಾಗಿತ್ತು ಹುಲ್ಲಿನ ಮನೆ ಮಣ್ಣಿನ ಗೋಡೆ ಒಂದು ಸಣ್ಣ ಗಾಳಿ ಬಂದರೂ ಇಡೀ ಮನೆಯ ಮಾಡು ಅಲುಗಾಡುತ್ತಿತ್ತು… ಮಾಡು ತುಂಬೆಲ್ಲಾ ತೇಪೆ ಹಚ್ಚಿದರೂ ಕಣ್ತಪ್ಪಿಸಿ ಸೋರುವ ಹನಿಗಳು ರಾತ್ರಿ ಮಲಗಿದಾಗ ತೊಪ್ಪನೆ ಮುಖದಮೇಲೆ ಬಿದ್ದಾಗಲೆ ಅರಿವಾಗುತ್ತಿತ್ತು. ಇನ್ನು ಇಲಿ ಹೆಗ್ಗಣಗಳ ಸುರಂಗಗಳು ರಾತ್ರಿ ಹೊತ್ತಿನಲ್ಲಿ ಯುದ್ಧಭೂಮಿಯಲಿ ಮಲಗಿದಂತೆ ಭಾಸವಾಗುತ್ತಿತ್ತು. ಆಗೆಲ್ಲ ಹುಲ್ಲಿನ ಮಾಡಿಗೆ ಹುಲ್ಲು ತರಲು ಕಾಂಚಾಣ ಸಮಸ್ಯೆ, ಅದು ಸರಿ ಹೊಂದರೆ ಹುಲ್ಲು ಹುಡುಕುವುದೇ ಸವಾಲು, ಎಲ್ಲವೂ ಸರಿಯಾದರೆ ಮನೆಯ ಮಾಡು ಹತ್ತಿ ಹುಲ್ಲು ಜೋಡಿಸುವವರನ್ನು ಹುಡುಕಿ ತರುವುದೋ ದೊಡ್ಡ ಸವಾಲು. ಇವು ಯಾವುದೂ ಆಗಿಲ್ಲ ವೆಂದರೆ ಆ ವರ್ಷ ಕಳೆಯುವುದೆಂದರೆ ಜೀವ ಕೈಯಲ್ಲಿ ಹಿಡಿಕೊಂಡಂತೆ. ಆಷಾಢ ಬಂತೆಂದರೆ ನಮಗೆ ಶಾಪದಂತೆ, ಯಾಕಾದರೂ ಬರುತ್ತೋ ಎಂಬ ಭಾವ. ಕಡಲು ತೂಫಾನಿನಿಂದ ರಜ ಸಾರಿದರೆ ಒಡಲು ಕೂಳಿಲ್ಲದೇ ಪರಿತಪಿಸುವ ಪರಿ ಅನುಭವಿಸಿದರಷ್ಟೇ ಅರಿವಾದೀತು.
2000 ನೇ ಇಸವಿ ತನಕ ನಮ್ಮ ಬದುಕು ಅಂತೆಯೇ ಇತ್ತು. ಆದರೆ ಅದರಲ್ಲೇ ಸಮಸ್ಯೆ ಇತ್ತು, ಸಾಂತ್ವಾನವಿತ್ತು, ಸುಖವಿತ್ತು, ನಿರುಮ್ಮಳತೆ ಇತ್ತು… ಮಳೆ ಬಂದರೆ ಸುಮ್ಮನೆ ಅಮ್ಮ ಅಂದಾಗ ತಲೆಯ ಮೇಲೆ ಗೆರೆಸಿ ಕೊಟ್ಟು “ದೂರ ಹೋಗಬೇಡ ಇಲ್ಲೇ ಕಾಣೋ ಕಡೆ ಕುತ್ಕೋ” ಎಂದು, ಮುಗಿಸಿ ಬಂದ ಮೇಲೆ “ಅಮ್ಮ ಆಯ್ತು” ಎಂಬ ಭಾವದ ಸ್ಫುರಣೆ ಈಗೆಲ್ಲೋ ಕಳೆದು ಹೋಗಿದೆ.
ಸರಿ ಸುಮಾರು ನಾನು ಎಂಟನೆ ತರಗತಿ ಹೋಗುವ ತನಕ ಕೊಡೆಯ ಮುಖ ಕಂಡವನೇ ಅಲ್ಲ… ನಮ್ಮದೇನಿದ್ದರು ಅಕ್ಕ, ತಮ್ಮನ ಜತೆ ಆಗ ಹತ್ತು ರೂಪಾಯಿಗೆ ಸಿಗುತ್ತಿದ್ದ ಪ್ಲಾಸ್ಟಿಕ್ ಗೊರ್ಬು ನಮಗೆ ಆಧಾರವಾಗಿತ್ತು.. ಮಳೆ,ಗಾಳಿ ಜೋರಾದಂತೆ ಮುದುರಿ ಒಂದೆಡೆ ಅದರೊಳಗೆ ನಿಲ್ಲುವ ಆನಂದ ಈಗೀನ ದುಬಾರಿ ಕೊಡೆಯಲ್ಲಿ ಎಲ್ಲಿದೆ? ಒಂದೇ ಬಣ್ಣದ ಪ್ಲಾಸ್ಟಿಕ್ ಒಳಗೆ ಬಣ್ಣದ ಕನಸುಗಳಿದ್ದವು, ಇಂದು ಕೊಡೆಗಳು ಮಾತ್ರ ಬಣ್ಣ ಬಣ್ಣದ್ದಾಗಿದೆ.. ವರ್ಷದಿಂ ವರ್ಷಕ್ಕೆ ಕೊಡೆಯ ಬಣ್ಣ ಬದಲಾಗುತ್ತಿರುವಂತೆ ಮನಸೂ ಕೂಡ ಗಳಿಗೆ ಗಳಿಗೆಗೂ ಬದಲಾಗುತ್ತಿದೆ…
ಇಡೀ ವಿಶ್ವವೇ ಅದೆಲ್ಲೋ ಓಡುತ್ತಿದೆಯಂತೆ, ಅದೂ ಅಮಿತ ವೇಗದಲ್ಲಿ. ಅದರೊಂದಿಗೆ ನಾವೂ ಕೂಡ. ದಾಸವಾಣಿಯಂತೆ ಅಂದು ಮನೆಮಾಳಿಗೆ ಅಷ್ಟೇ ಸೋರುತ್ತಿತ್ತು, ಆದರೆ ಇಂದು ಮನಸ್ಸೂ ಸೋರುತ್ತಿದೆ.. ಮಳೆಯೆಂದರೆ ಮೊದಲಿನಂತೆ ಕಸುವಿಲ್ಲ ; ಕನಸಿಲ್ಲ; ಕಲ್ಪನೆಯಿಲ್ಲ; ಭಾವಗಳು ತೊಟ್ಟಿಕ್ಕುತ್ತಿಲ್ಲ ; ರೋಂಯ್ಯನೇ ಬೀಸಿ ಬರುವ ಕುಳಿರ್ಗಾಳಿಯ ಪುಳಕವಿಲ್ಲ ಏಕೆಂದರೆ ನೆನೆಯದಂತೆ ಕೊಡೆ ಹಿಡಿದುಕೊಂಡಿದ್ದೇವಲ್ಲ. ಅದೂ ಎಂತಹ ಕೊಡೆ!? ಔಪಚಾರಿಕತೆ, ವ್ಯವಹಾರ, ನಿರ್ಭಾವುಕತೆ, ಸ್ವಾರ್ಥತೆಯ ಗಟ್ಟಿ ಹೊದಿಕೆಯ ಕೊಡೆ. ಇಷ್ಟೆಲ್ಲ ಇದ್ದಾಗ್ಯೂ ಒಂದು ಹನಿಯಾದರೂ ಹೇಗೆ ಒಳ ಬಂದೀತು? ಮೈ ಮನಸು ಹೇಗೆ ನೆನೆದೀತು!?
ಕಾಲಕಳೆದಂತೆ ಮನೆಗೆ ಹಂಚಿನ ಮಾಡು, ಬೆಚ್ಚನೆಯ ಹೊದಿಕೆ ಬಂದಿದೆ, ಮಳೆಗಾಲ ಅವಿನಾಭಾವವಾಗದೆ ಕೇವಲ ಋತುವಾಗಿ ಬದಲಾಗಿದೆ. ಅದು ನಮಗಷ್ಟೇ.
ಇಂದು ವರ್ಷದ ಮೊದಲ ಮಳೆ ಬಂತು, ಅದರೊಂದಿಗೆ ಹಳೆ ನೆನಪುಗಳನೂ ಹೊತ್ತು ತಂದಿತು.. ಅಂದು ಮಾಳಿಗೆಯಷ್ಟೇ ಸೋರುತ್ತಿತ್ತು.. ಇಂದು ಮಾಳಿಗೆ ಜಬರ್ದಸ್ತಾಗಿದೆ ಆದರೆ …… !?