ಹಾಯಿದೋಣಿ: ನಮಗೂ ಸಮುದ್ರ ಉಂಟು

ಇಂದು ವಿಶ್ವ ಸಮುದ್ರ‌ ದಿನ. ಎಲ್ಲಾ ವಿಷಯಗಳಿಗೂ ಒಂದೊಂದು ದಿನಾಚರಣೆ ಇದ್ದ ಹಾಗೆ ಸಮುದ್ರಕ್ಕೂ ಒಂದು ದಿನಾಚರಣೆ ಎಂದು ಭಾವಿಸುವುದಾದರೆ ಹತ್ತರಲ್ಲಿ ಇದೂ ಒಂದು ಅನ್ನಿಸಬಹುದು. ಆದರೆ ವಿಶ್ವ ಸಮುದ್ರ ದಿನ, ಒಂದು ದಿನದ ಕಾರ್ಯಕ್ರಮವಲ್ಲ. ಅದೊಂದು ಜೀವನ ಕ್ರಮದ ಒಂದು ಭಾಗ.

ಮಾನವ ಜೀವನದ ಹಾಸುಹೊಕ್ಕಾದ ದೈನಂದಿನ ಸಂಭ್ರಮಾಚರಣೆ. ಜಲಚರ ಮತ್ತು ಭೂಚರ ಜೀವ ಸಂಕುಲದ ವಿಸ್ಮಯದ ಅರಿಯುವಿಕೆ ; ಅರಿಯುವುದರ ಜೊತೆಜೊತೆಗೆ ಮಾನವನೆಂಬ (ಅ)ನಾಗರಿಕ ವ್ಯಕ್ತಿ ತಾನು ಉಳಿಯಬೇಕಾದರೆ ಸುತ್ತಲಿನ ಜೈವಿಕ ಅಂಶಗಳನ್ನು ಉಳಿಸಬೇಕೆಂಬ ಎಚ್ಚರಿಕೆ. ಎಷ್ಟೋ ದೇಶಗಳಿಗೆ ಸಮುದ್ರವೆಂಬ ಭೌಗೋಳಿಕ ಭಾಗವೊಂದು ಇಲ್ಲದಿರುವಾಗ, ಭಾರತದಂತಹ ಹಲವು ದೇಶಗಳಿಗೆ ಸಮುದ್ರದೊಂದಿಗೆ ಬೆರೆಯುವ, ಅರಿಯುವ, ಅದರ ಮಡಿಲಲ್ಲಿ ಹುಟ್ಟಿ, ಬೆಳೆದು ಅಳಿಯುವ ಸೌಭಾಗ್ಯ ದೊರೆತಿದೆ. ಮೂರು ಕಡೆಯಿಂದ ಸಮುದ್ರದ ಸಖ್ಯ ಪಡೆದ ಭಾರತೀಯರು ಧನ್ಯರು.

ಸಂಪತ್ತಿನಿಂದಲೂ, ಸೊಬಗಿನಿಂದಲೂ ಪದಗಳ ವರ್ಣನೆಗೆ ನಿಲುಕದ ಅನೂಹ್ಯವಾದ ಪ್ರಾಕೃತಿಕ ಸಂಪತ್ತದ ಸಮುದ್ರದ ತೀರವನ್ನು ಪಡೆದ ಭಾರತದ ಕೆಲವೇ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಜನರು ಓಡಾಡುವ, ಉಸಿರಾಡುವ, ದುಡಿಯುವ, ಮಿಡಿಯುವ ಎಲ್ಲಾ ವಿಚಾರಗಳೂ ಸಮುದ್ರದಿಂದ ಪ್ರಭಾವಿಸಲ್ಪಟ್ಟಿದೆ. ಆದ್ದರಿಂದ ಇಂದಿನ ವಿಶ್ವ ಸಮುದ್ರದ ದಿನದ ಮಹತ್ತ್ವ, ಸತ್ತ್ವ, ಅಸ್ತಿತ್ವವನ್ನು ನಾವು ತಿಳಿಯಲೇಬೇಕು.

ಕೋಟ್ಯಂತರ ಜನರ ಉದರವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪೊರೆಯುತ್ತಿರುವ ಸಮುದ್ರಕ್ಕೆ, ಪ್ರತಿಯಾಗಿ ನಾವೇನು ನೀಡಿದ್ದೇವೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಜೀವ ಸಂಕುಲದ ಅಸ್ತಿತ್ವಕ್ಕೆ ಸಂಚಕಾರ ಉಂಟುಮಾಡುವ ಪ್ಲಾಸ್ಟಿಕ್‌ನ್ನು ಸಮುದ್ರಕ್ಕೆ ಸುರಿದಿದ್ದೇವೆ; ಸಮುದ್ರದ ನೀರಿನ ಮೇಲೆ ತೇಲುವ ಕಣ್ಣಿಗೆ ಕಾಣದ ಅಲ್ಗೆಯಂತಹ ಸಸ್ಯ ಸಂಪತ್ತು ನಾಶವಾಗುವುದೆಂದು ತಿಳಿದೂ, ತೈಲವನ್ನು ಸಮುದ್ರದಲ್ಲಿ ಸೇರಿಸುತ್ತಿದ್ದೇವೆ; ಕೈಗಾರಿಕೆಯ ತ್ಯಾಜ್ಯ ಸಮುದ್ರದ ಜಲಚರಗಳ ಸಂತತಿ ನಾಶ ಮಾಡುವುದೆಂಬ ಕಲ್ಪನೆಯಿದ್ದರೂ, ಟನ್‌ಗಟ್ಟಲೆ ವಿಷಯುಕ್ತ ರಾಸಾಯನಿಕ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುತ್ತಿದ್ದೇವೆ. ಯಾಂತ್ರಿಕ ಮೀನುಗಾರಿಕೆಯಿಂದ ಮತ್ಸ್ಯ ಕ್ಷಾಮ ಉಂಟಾಗುವುದೆಂದು ಅರಿತರಿತೂ ಯಾಂತ್ರಿಕ ಮೀನುಗಾರಿಕೆಯ ನಾಗಾಲೋಟವನ್ನು ಹೆಚ್ಚಿಸಿಕೊಂಡಿದ್ದೇವೆ;

ಪ್ರವಾಸೋದ್ಯಮದ ಹೆಸರಿನಲ್ಲಿ ಕಡಲ ತೀರವನ್ನು ಹಿಂದೆಂದಿಗಿಂತಲೂ ಹೆಚ್ಚು ಕಲುಷಿತಗೊಳಿಸುತ್ತಿದ್ದೇವೆ ಎಂಬುದು ಅರಿವಿಗೆ ಬಂದರೂ ದಿನೇ ದಿನೇ ಸಮುದ್ರ ದಂಡೆಯು ಪ್ರವಾಸಿಗರ ಸ್ವರ್ಗವಾಗಿ ಜಲಚರಗಳಿಗೆ ನರಕವಾಗಿದೆ. ಸಮುದ್ರದ ಇವೆಲ್ಲಾ ವಿಚಾರವನ್ನು ಗಮನಿಸಿದಾಗ ಮನುಷ್ಯನಿಗೆ ಸಮುದ್ರ ದಿನಾಚರಣೆ ಆಚರಿಸುವ ಹಕ್ಕಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಉಳಿಸುವ ಪ್ರಕಿಯೆಯ ಶೇಕಡಾ ಪ್ರಮಾಣಕ್ಕಿಂತ ನಾಶ ಮಾಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನಮ್ಮ ಸಮುದ್ರ ನಮ್ಮ ಕಲ್ಪನೆಗೆ ಮೀರಿ ಹಾಳಾಗುತ್ತಿದೆ. ಕೋಟ್ಯಂತರ ಜನರಿಗೆ ಅನ್ನ ನೀಡಿದ, ನೀಡುತ್ತಿರುವ ಸಮುದ್ರಕ್ಕೆ ವಿಷವನ್ನು ಉಣಿಸುತ್ತಿರುವ ನಾವು, ಅದೇ ವಿಷವನ್ನು ಉಣ್ಣುವ ಸ್ಥಿತಿಗೆ ಬಂದಿದ್ದೇವೆ. ಪುಕ್ಕಟೆಯಾಗಿ ಒಂದು ತುಂಡು ಜಾಗ ಕಂಡರೆ ಮನೆಯ ಕಸವನ್ನು ಪಾಸ್ಟಿಕ್‌ಗಳಲ್ಲಿ ತುಂಬಿಸಿ ಆ ಸ್ಥಳದಲ್ಲಿ ಬಿಸಾಡುವ ನಾವು, ಸಮುದ್ರದಂತಹ ವಿಶಾಲ ಸ್ಥಳವನ್ನು ಬಿಡುತ್ತೇವೆಯೇ…?

ಹೆಸರಿಗಷ್ಟೇ ಗಂಗಾಮಾತೆ, ಜಲಮಾತೆ ಎನ್ನುತ್ತಾ, ಯಾವುದೋ ಒಂದು ಪುಣ್ಯ ದಿನದಲ್ಲಿ ಸಮುದ್ರವನ್ನು ಪೂಜಿಸಿ, ಹೊಗಳಿ ಅಟ್ಟಕ್ಕೇರಿಸುವ ಮನುಷ್ಯ, ಉಳಿದ ಮುನ್ನೂರ ಅರವತ್ತ್ನಾಲ್ಕು ದಿನಗಳಲ್ಲಿ ಮಾಲಿನ್ಯ ಮಾಡುವುದರಲ್ಲಿ ಕಳೆಯುತ್ತಿದ್ದಾನೆ. ಸಮುದ್ರಗಳ ನಾಶದಲ್ಲಿ ನನ್ನದೂ ಒಂದು ಪಾಲಿರಲಿ ಎಂದು ಮಾಲಿನ್ಯ ಮಾಡುವ ಮನುಷ್ಯರ ಎಡೆಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ವ್ಯಕ್ತಿ, ಅಲ್ಲೊಂದು ಇಲ್ಲೊಂದು ಸಂಸ್ಥೆಗಳು ಪರಿಸರದ ಉಳಿವಿಗಾಗಿ ಅಹರ್ನಿಶಿ ದುಡಿಯುತ್ತಿದೆ.

ದೊಡ್ಡ ದೊಡ್ಡ ಕೈಗಾರಿಕೆಯು ಸಮುದ್ರಕ್ಕೆ ತ್ಯಾಜ್ಯ ಸೇರಿಸುವ ದೊಡ್ಡ ದೊಡ್ಡ ಪೈಪ್ ಗಳ ಬಾಯಿಯನ್ನು ನಮ್ಮಿಂದ ಮುಚ್ಚಿಸಲು ಸಾಧ್ಯವಿಲ್ಲ; ತೈಲ ಸೋರಿಕೆ ಮಾಡುವ ದೊಡ್ಡ ದೊಡ್ಡ ಹಡಗುಗಳಿಗೆ ಮೂಗುದಾರ ಹಾಕಿ ದಡಕ್ಕೆ ಎಳೆದು ತಂದು, ಕಟ್ಟಿಹಾಕುವ ತಂತ್ರ ನಮಗೆ ತಿಳಿದಿಲ್ಲ. ಆದರೆ ಗ್ರೀನ್ ಫೀಸ್ ನಂತಹ ಪರಿಸರ ಕಾಳಜಿ ಇರುವ ಅಂತಾರಾಷ್ಟ್ರೀಯ ಸಂಸ್ಥೆಗಳು ಇಂತಹ ಕೆಲಸವನ್ನು ಮಾಡುತ್ತಾರೆ. ಕೆಲವು ಚಿಕ್ಕಪುಟ್ಟ ಕರ್ತವ್ಯಗಳು ನಮ್ಮಿಂದ ಸಾಧ್ಯವಿದೆ. ಭೂಮಿಯ ಮೇಲಿನ ಇಡೀ ಜಲರಾಶಿಯನ್ನು ನನ್ನೊಬ್ಬನಿಂದಲೋ ಅಥವಾ ನಿಮ್ಮೊಬ್ಬರಿಂದಲೋ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಸಮುದ್ರ ದಂಡೆಯಲ್ಲಿ ತಿರುಗುತ್ತಾ ಸಾಗುವಾಗ, ನಾವು ತಿನ್ನುವ ತಿನಿಸನ್ನು ಸುತ್ತಿಟ್ಟಿದ್ದ ಪ್ಲಾಸ್ಟಿಕ್‌ನ್ನು ಸಮುದ್ರಕ್ಕೆ ಬಿಸಾಡದಿರೋಣ; ಉದಾರವಾಗಿ ದಾನ ಮಾಡುವ ಗುಣ ಹೊಂದಿರುವ ನಾವು, ನಮ್ಮ ಮನೆಯ ಕಸವನ್ನು ಸಮುದ್ರಕ್ಕೆ ದಾನ ಮಾಡದಿರೋಣ; ಸಂಜೆಯ ಹೊತ್ತು ಸಮುದ್ರ ದಡದಲ್ಲಿ ತಿರುಗುತ್ತಿರುವ ಸಮಯದಲ್ಲಿ ಅಲ್ಲಲ್ಲಿ ಕಂಡು ಬರುವ ಒಂದಿಷ್ಟು ನೀರಿನ ಬಾಟಲ್ ಗಳನ್ನು ಹೆಕ್ಕಿ, ಅಲ್ಲೇ ಇಟ್ಟಿರುವ ಕಸದ ಬುಟ್ಟಿಗೆ ಹಾಕೋಣ; ಮನೆಯಲ್ಲಿ ಕೂತು ಕುಡಿದರೆ, ಗಂಟಲಿಗೆ ಇಳಿಯದೆ ಸಮುದ್ರ ದಂಡೆಯಲ್ಲಿ ಸಂಜೆಗತ್ತಲಿನಲ್ಲಿ ಕೂತು, ಕುಡಿದು, ಗಾಜಿನ ಬಾಟಲ್ ಗಳನ್ನು ಸಮುದ್ರಕ್ಕೆ ಬಿಸಾಡುವ ಮನಸ್ಥಿತಿಯಿದ್ದರೆ, ಅದರಿಂದ ಹೊರ ಬರೋಣ. ಬೀಚ್ ಸ್ವಚ್ಛತೆ ಮಾಡುವ ಕೆಲವು ಯುವಪಡೆಗಳು ಸಮುದ್ರ ದಂಡೆಯಲ್ಲಿ ಸ್ವಚ್ಛ ಮಾಡುವ ದೃಶ್ಯ ಕಂಡು ಬಂದರೆ, ದೂರ ನಿಂತು ವೇದಾಂತ ಹೇಳುವ ಬದಲು ಅವರೊಂದಿಗೆ ನಾವೂ ಸೇರಿಕೊಳ್ಳೋಣ.

ಸಮುದ್ರ ನಮ್ಮೆಲ್ಲರ ಆಸ್ತಿ. ಮನುಷ್ಯನ ಶಕ್ತಿ. ನಾಗರಿಕತೆ ಅರಳುವ ತೊಟ್ಟಿಲು; ಎಷ್ಟೋ ಜನರ ಅನ್ನದ ಬಟ್ಟಲು. ವಿಶ್ವ ಸಮುದ್ರ ದಿನ ಜೂನ್ ಎಂಟಕ್ಕೆಂದು ಇವತ್ತು ಮಾತ್ರ ಸಮುದ್ರದ ಕಾಳಜಿ ವಹಿಸುವ ಬದಲು, ವರ್ಷಪೂರ್ತಿ ಕಾಳಜಿ ವಹಿಸುವ ಮನಸ್ಥಿತಿ ನಮ್ಮದಾಗಲಿ.

ನಾಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *