ಹಾಯಿ ದೋಣಿ: ನಮ್ಮ ಕರಾವಳಿಯಲ್ಲೂ ಅಂಡಮಾನ್‌ನ ಜೀವನವಿದೆ

ಸೌರವ್ಯೂಹದಲ್ಲಿ ನೀರಿರುವ ಅನನ್ಯ ಗ್ರಹವೆಂದರೆ ಭೂಮಿ. ನೀರಿರುವ ಕಾರಣದಿಂದ ಭೂಮಿಯ ಮೇಲೆ ಸಕಲ ಜೀವರಾಶಿಗಳಿವೆ.

ಭೂಭಾಗಕ್ಕಿಂತಲೂ ನೀರು ಹೆಚ್ಚಿರುವ ಕಾರಣ ಭೂಮಿಯನ್ನು ನೀಲಿಗೋಳ, ಜಲಗೋಳ ಎಂಬ ಕರೆಯುತ್ತಾರೆ. ಈ ನೀರು ಸಮುದ್ರ, ಸಾಗರ, ನದಿ, ಎರಡು ಧ್ರುವ ಪ್ರದೇಶಗಳು ಮತ್ತು ಅಂತರ್ಜಲದ ರೂಪದಲ್ಲಿದೆ. ಇಷ್ಟು ಅಗಾಧ ಪ್ರಮಾಣದ ನೀರಿನ ಮಧ್ಯದಲ್ಲಿರುವ ಭೂಭಾಗದ ಮೇಲೆ ಮನುಷ್ಯ ಬದುಕುತ್ತಿದ್ದಾನೆ. ನೀರಿನ ಮಧ್ಯದಲ್ಲಿರುವ ಭೂಭಾಗವನ್ನು ಸಾಮಾನ್ಯವಾಗಿ ದ್ವೀಪ ಎನ್ನುತ್ತೇವೆ. ಭೂಗೋಲಶಾಸ್ತ್ರದ‌ ಪರಿಭಾಷೆಯಲ್ಲಿ ಸುತ್ತಲು ಸಮುದ್ರ ಅಥವಾ ಸಾಗರ ಇರುವ ಭೂಭಾಗವೇ ದ್ವೀಪ. ಹಾಗೆ ನೋಡಿದರೆ ಭೂಮಿಯ ಮೇಲಿನ ಪ್ರತಿಯೊಂದು ಭೂಭಾಗವೂ ಒಂದು ದ್ವೀಪವೆ.

ನಾನಿಂದು ಹೇಳ ಹೊರಟಿದ್ದು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಸಾಗರ, ಸಮುದ್ರದ ನಡುವಿನ ದ್ವೀಪಗಳ ಬಗೆಗಲ್ಲ. ಅತ್ಯಂತ ಕಡಿಮೆ ವಿಸ್ತಾರ ಹೊಂದಿರುವ ಕುದ್ರುಗಳ ಬಗೆಗೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ನದಿ ದ್ವೀಪಗಳನ್ನು ಕುದುರು ಅಥವಾ ಕುದ್ರುಗಳೆಂದು ಕರೆದರೆ, ಉತ್ತರ ಕನ್ನಡದಲ್ಲಿ ಕುರ್ವೆ, ಕೂರ್ವೆ, ಜೂಗ್ ಎನ್ನುತ್ತಾರೆ. ಜಗತ್ತಿನಲ್ಲಿ ಅತಿ ದೊಡ್ಡ ನದಿ ದ್ವೀಪವೆಂದರೆ ಬ್ರಹ್ಮಪುತ್ರಾ ನದಿಯ ಮಧ್ಯದಲ್ಲಿರುವ ಮಜುಲಿ ದ್ವೀಪ.

ನಮ್ಮ ಕರ್ನಾಟಕ ಕರಾವಳಿಯಲ್ಲೂ ನೂರಾರು ಹೆಸರಾಂತ ನದಿ ದ್ವೀಪಗಳಿವೆ. ಕುಂದಾಪುರವನ್ನು ಪಂಚಕುದ್ರುಗಳ ತವರೂರು ಎಂದೇ ಕರೆಯಲಾಗಿದೆ. ಕೇವಲ ಸ್ಮಶಾನದ ಉದ್ದೇಶಕ್ಕಾಗಿ ಬಳಸುತ್ತಿರುವ ಬಬ್ಬುಕುದ್ರು, ಕನ್ನಡ ಎಂಬ ಹೆಸರಿನೊಂದಿಗೆ ವಿಶೇಷವಾಗಿ ಕರೆಯಲ್ಪಡುವ ಕನ್ನಡಕುದ್ರು, ಯಕ್ಷಗಾನ ಗೊಂಬೆಯಾಟವನ್ನು ದೇಶವಿದೇಶಗಳಲ್ಲಿ ಪರಿಚಯಿಸಿದ ಕೊಗ್ಗ ಕಾಮತರ ಕರ್ಮಭೂಮಿ ಉಪ್ಪಿನಕುದ್ರು, ಹನಿಗವನಗಳ ಮೂಲಕ ವಿಖ್ಯಾತರಾದ ಡುಂಡಿರಾಜರ ಹುಟ್ಟೂರಾದ ಹಟ್ಟಿಕುದ್ರು, ಕಲ್ಲು ತುಂಬಿಸಿಕೊಂಡು ಹೋಗುವ ವಾಹನಗಳಿಂದ ಒಂದೊಂದು ಕೆಂಪು ಕಲ್ಲನ್ನು ಹರಕೆಯಂತೆ ಪಡೆದು ಸುಗಮ ಸಂಚಾರಕ್ಕೆ ಹರಸುವ ಅರೆಕಲ್ಲು ಬೊಬ್ಬರ್ಯನ ಗುಡಿ ಇರುವ ಹೇರಿಕುದ್ರು ಕುಂದಾಪುರದ ಸೌಂದರ್ಯ ಹೆಚ್ಚಿಸಿದ ಐದು ಕುದ್ರುಗಳು.

ಇವುಗಳಲ್ಲದೆ, ಸೌಂದರ್ಯದ ಸಿರಿ ಹೊತ್ತ ಮರವಂತೆಯ ಸೌಪರ್ಣಿಕ ನದಿಯ ಮಧ್ಯದಲ್ಲಿರುವ ಕುರುಕುದ್ರು, ಒಂದೇ ಮನೆ ಹೊಂದಿದ ಬಾವು ಕುದ್ರು ಸಹ ಹೆಸರುವಾಸಿಯಾಗಿವೆ. ಮೊಗವೀರರ ಕುಲದೇವರಾದ ಕುಲಸ್ತ್ರೀ ಮಹಾಸತಿ ನೆಲೆಸಿರುವ ಬ್ರಹ್ಮಾವರದ ಬಾರ್ಕೂರು ಸಮೀಪದ ಬೆಣ್ಣೆಕುದ್ರು, ಬಾವಲಿ ಕುದ್ರು, ಶೆಟ್ಟಿ ಕುದ್ರು, ಸಾಬರ ಕುದ್ರು, ರಾಮಣ್ಣ ಕುದ್ರು, ಪಿತ್ರೋಡಿ ಸಮೀಪದ ಜಾರು ಕುದ್ರು ಉಡುಪಿ ಜಿಲ್ಲೆ ಮುಕುಟಗಳು. ಮಂಗಳೂರಿನ ಮರಕಡ ಸಮೀಪದ ಬಡ್ಡ ಕುದ್ರು, ಹೆಜಮಾಡಿ ಸಮೀಪದ ನಡಿ ಕುದ್ರು, ನೇತ್ರಾವತಿ ನದಿಯ ನಡುಗಡ್ಡೆಗಳಾದ ಅದಂಕುದ್ರು, ಉಳಿಯ ಕುದ್ರು, ಕೊಟ್ಟಾರಿ ಕುದ್ರು, ರಾಣಿಪುರ ಕುದ್ರು ಮಂಗಳೂರಿಗೆ ಶೋಭೆಯನ್ನು ತಂದುಕೊಟ್ಟಿವೆ. ಅಘನಾಶಿನಿ ನದಿಯಲ್ಲಿ ಕಂಡುಬರುವ ಐಗಳ ಕೂರ್ವೆ, ಕಪ್ಪೆ ಕೂರ್ವೆ, ಮಾಸೂರ ಕೂರ್ವೆ, ಗಂಗಾವಳಿ ನದಿಯ ಕೂರ್ವೆ, ಮೋಟನ ಕೂರ್ವೆ, ಕಾಳಿ ನದಿಯ ದ್ವೀಪಗಳಾದ ಖಾರ್ಗೆ ಜೂಗ್, ಉಂಬಳಿ ಜೂಗ್, ಹಳಗೆ ಜೂಗ್ ಉತ್ತರ ಕನ್ನಡದ ನೈಸರ್ಗಿಕ ಸಂಪತ್ತುಗಳು. ಜಗತ್ ಪ್ರಸಿದ್ಧ ಮಾವಿನಕುರ್ವೆ ಎಂಬ ಹೆಸರಿನ ಬೀಗದ ತವರೂರು ಹೊನ್ನಾವರದ ಮಾವಿನಕುರ್ವೆ ಎಂಬುದು ಎಲ್ಲರಿಗು ತಿಳಿದ ಸಂಗತಿಯೆ.

ಇವೆಲ್ಲ ಕರ್ನಾಟಕ ಕರಾವಳಿಯ ಹೆಸರಾಂತ ಕುದ್ರುಗಳು. ಕುದ್ರುಗಳಲ್ಲಿರುವ ಅಪಾರ ಪ್ರಮಾಣದ ಕಾಂಡ್ಲಾವನ, ವರ್ಣಿಸಲಾಗದ ಪ್ರಕೃತಿ ಸೌಂದರ್ಯ, ಕುದ್ರುನಿವಾಸಿಗರ ಆತಿಥ್ಯಕ್ಕೆ ಮನ ಸೋಲದವರಿಲ್ಲ.

ಬ್ರಿಟಿಷರ ಕಾಲದಲ್ಲಿ ಭಾರತದ ಸ್ವತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಮತ್ತು ಬ್ರಿಟಿಷರ ವಿರುದ್ಧ ಸಂಚು ಹೂಡಿದವರನ್ನು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಬಿಟ್ಟು ಬರುತ್ತಿದ್ದರು. ಅವರು ವಿಶಾಲ ಬಂಗಾಳ ಕೊಲ್ಲಿಯ ಮೂಲಕ ಈಜಿ ಭಾರತಕ್ಕೆ ಬರಲು ಸಾಧ್ಯವೇ ಇರಲಿಲ್ಲ, ಅಲ್ಲಿ ಬದುಕುವಂತೆಯೂ ಇರಲಿಲ್ಲ. ಅಂಡಮಾನಿನ ಕಾಡು ಸೇರಿದರೆ ಅಲ್ಲಿ ಕಾಡುನಿವಾಸಿಗಳಿಂದ ವಿಷಪೂರಿತ ಬಾಣಗಳ ಸ್ವಾಗತ ಸಿಗುತ್ತಿತ್ತು. ಅದೊಂದು ರೀತಿಯ ವಿಚಿತ್ರ, ವಿಭಿನ್ನ ಶಿಕ್ಷೆ. ಮುಂದೆ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು ಇದೇ ದ್ವೀಪದಲ್ಲಿ ಸೆಲ್ಯೂಲರ್ ಜೈಲು ಕಟ್ಟಿದ್ದು ಇತಿಹಾಸ. ನಮ್ಮ ಕುದ್ರು ನಿವಾಸಿಗಳ ಗೋಳಿನ ಕಥೆಗೂ, ಅಂಡಮಾನ್ ದ್ವೀಪದ ಅಜ್ಞಾತವಾಸಕ್ಕೂ ಹೆಚ್ಚು ಭಿನ್ನತೆ ಇರಲಾರದು.

ಕುದ್ರುಗಳು ನೀರಿನ ಮಧ್ಯೆ ಇರುವ ಕಾರಣ, ನೀರಿನಿಂದ ಯಾವ ಸಂದರ್ಭದಲ್ಲೂ ಅಪಾಯ ಉಂಟಾಗಬಹುದು. ರಾತ್ರೋ ರಾತ್ರಿ ಮಳೆ ಸುರಿದು ನೆರೆಯುಂಟಾಗಿ, ಕುದ್ರುನಿವಾಸಿಗಳ ಬದುಕು ಮೂರಾಬಟ್ಟೆಯಾಗಬಹುದು. ಒಮ್ಮೊಮ್ಮೆ ವಾರಗಟ್ಟಲೆ ಮಳೆ ಸುರಿದಾಗ ಎಲ್ಲಿ ತಮ್ಮ ಕುದ್ರು ಬುಡಸಮೇತ‌ ಕಿತ್ತು ಹೋಗಿ ಸಮುದ್ರ ಸೇರುವುದೋ ಎಂಬ ಹೆದರಿಕೆಯಲ್ಲಿಯೇ ಕುದ್ರು ನಿವಾಸಿಗಳು ಕಾಲ ಕಳೆಯುತ್ತಾರೆ. ಮಳೆಗಾಲದ ಆರು ತಿಂಗಳುಗಳ ಕಾಲ ಕುದ್ರು ನಿವಾಸಿಗಳಿಗೆ ಅಕ್ಷರಶಃ ನರಕ ಜೀವನದ ಕಾಲ. ಹೊರಜಗತ್ತಿನ ಸಂಪರ್ಕವಿಲ್ಲದೆ, ಉಕ್ಕಿ ಹರಿಯುವ ನದಿಯನ್ನು ದಾಟಲೂ ಆಗದೆ ದ್ವೀಪದಲ್ಲಿ ಬಂಧಿಯಾಗಿ ಬಿಡುತ್ತಾರೆ. ಈ ಸಂದರ್ಭದಲ್ಲಿ ಅನಾರೋಗ್ಯ ಕಾಡಿದಾಗ, ಗರ್ಭಿಣಿಯರಿಗೆ ಹೆರಿಗೆಯ ನೋವು ಬಂದಾಗ, ಮೂಲಭೂತ ವಸ್ತುಗಳು ಅತ್ಯಗತ್ಯವಾಗಿ ಬೇಕಾದಾಗ ದ್ವೀಪ ಬಿಟ್ಟು ಹೊರಹೋಗಲಾಗದೆ ಅವರು ಪಡುವ ನೋವು, ಸಮಸ್ಯೆಗಳು ದೇವರಿಗೇ ಪ್ರೀತಿ. ವಯಸ್ಸು ಮತ್ತು ಲಿಂಗಭೇದವಿಲ್ಲದೆ ಪ್ರತಿ ಮನೆಯ ಪ್ರತಿಯೊಬ್ಬ ಸದಸ್ಯರೂ ದೋಣಿಯ ಹುಟ್ಟುಹಾಕಲು ಕಲಿತಿರಬೇಕು. ಇಲ್ಲದಿದ್ದರೆ ಪ್ರತಿಬಾರಿಯೂ ಬೇರೆಯವರನ್ನು ಅವಲಂಬಿಸಿರಬೇಕಾಗುತ್ತದೆ. ಮೂಲಭೂತ ಸೌಲಭ್ಯಗಳಾದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ವಿದ್ಯುತ್ ಸೌಲಭ್ಯ, ಶಾಲೆ ಕಾಲೇಜುಗಳ ಸೌಕರ್ಯ ಇಂದಿಗೂ ಹಲವು ಕುದ್ರುಗಳಲ್ಲಿ ಇಲ್ಲ. ಇದ್ದರೂ ದೋಣಿಯಲ್ಲಿ ದಾಟಿ ಬರಬೇಕಾದ ಕಾರಣ ಹೆಚ್ಚಿನ ಅಧಿಕಾರಿಗಳು ಅತ್ತ ಕಡೆ ಮುಖ ಮಾಡಲಾರರು.

ಇತ್ತೀಚಿಗೆ ಹಲವು ಕುದ್ರುಗಳನ್ನು ಹೊರ ಜಗತ್ತಿನೊಂದಿಗೆ ಬೆಸೆಯಲು ಮರದ ಸೇತುವೆಗಳನ್ನು, ತೂಗು ಸೇತುವೆಗಳನ್ನು, ಆಧುನಿಕ ಸೇತುವೆಗಳನ್ನು ಕಟ್ಟಲಾಗಿದೆ. ಸೇತುವೆ ಕಟ್ಟುವಾಗ ಭೂ ಒಡೆತನದ ತಕರಾರುಗಳಿಂದ ಸೇತುವೆ ಬೇಕಾದ ಜಾಗಕ್ಕೆ ನಿರ್ಮಾಣವಾಗದೆ ಯಾವುದೋ ಕುಗ್ರಾಮವೊಂದಕ್ಕೆ ಬೆಸೆಯುತ್ತಾರೆ. ಅಲ್ಲಿಂದ ಪೇಟೆಗೆ ಹೋಗಬೇಕಾದರೆ ಪುನಃ ಹತ್ತಾರು ಕಿ.ಮೀ. ಸುತ್ತಾಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅದಕ್ಕಿಂತ ದೋಣಿಯೇ ವಾಸಿಯೆಂದು ದ್ವೀಪನಿವಾಸಿಗಳು ಸೇತುವೆಯ ಮೇಲಿನಿಂದ ಹೋಗದೆ ಪುನಃ ದೋಣಿಯನ್ನು ಆಶ್ರಯಿಸುತ್ತಾರೆ. ಸಮಯಕ್ಕೆ ಸರಿಯಾಗಿ ಸಿಗದ ದೋಣಿ; ದೋಣಿ ದಾಟಿದ ಮೇಲೆ ಸಮಯಕ್ಕೆ ಸರಿಯಾಗಿ ಬಸ್ಸು ಹಿಡಿಯಲಾಗದೆ ಶಾಲಾ-ಕಾಲೇಜುಗಳಿಗೆ, ಕಚೇರಿಗಳಿಗೆ ತಡವಾಗಿ ತಲುಪುವ ಅದೆಷ್ಟೋ ಉದಾಹರಣೆಗಳಿವೆ.

ಕುದ್ರುಗಳಲ್ಲಿ ಮನೆ ನಿರ್ಮಾಣ ಮಾಡಬೇಕಾದರೆ ಒಂದು ಅರಮನೆ ಕಟ್ಟಿದ ಅನುಭವವಾಗುವುದು. ಸೇತುವೆಗಳಿಲ್ಲದ ಕುದ್ರುಗಳಲ್ಲಿ , ಮನೆ ಕಟ್ಟುವ ಸಾಮಗ್ರಿಗಳನ್ನು ದೋಣಿಯಲ್ಲಿ ಸಾಗಿಸುವಾಗ ವೆಚ್ಚ ದುಪ್ಪಟ್ಟಾಗುತ್ತದೆ. ಕೆಲವು ಕುದ್ರುಗಳಲ್ಲಂತೂ ಪ್ರತೀ ಮಳೆಗಾಲವೂ ನೆರೆಯ ಹಾವಳಿ. ನೆರೆ ಬಂದಾಗ ಮನೆ ಬಿಡುವುದು, ನೆರೆ ಇಳಿದ ಮೇಲೆ ಮನೆಗೆ ಹೋಗಿ ಸ್ವಚ್ಛಗೊಳಿಸುವುದು ಸಾಮಾನ್ಯ. ಆದರೂ ಬದುಕಬೇಕು, ಕಷ್ಟಗಳ ಜೊತೆಗೆ ಪುನಃ ಬದುಕು ಕಟ್ಟಿಕೊಳ್ಳಬೇಕು.

ಮನುಷ್ಯನ ಬದುಕು ಸದಾ ಸವಾಲುಗಳಿಂದ ಕೂಡಿರುವುದು ಸತ್ಯ. ಆದರೂ ನೆಮ್ಮದಿಯ ಬದುಕು ನಡೆಸಬೇಕಲ್ಲ. ಕೆಲವು ಅನಿವಾರ್ಯ ಕಾರಣಗಳಿಂದ ಕುದ್ರುಗಳ ಮೇಲೆ ಜೀವನ ನಡೆಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ, ಮತ್ತು ವಿದ್ಯುತ್‌ನಿಂದ ಕುದ್ರು ನಿವಾಸಿಗಳು ವಂಚಿತರಾಗಲೇಬಾರದು. ಸಮುದ್ರಕ್ಕೆ ಸಮೀಪ ಇರುವ ಕುದ್ರುಗಳಲ್ಲಿ, ನದಿಯ ಹಿನ್ನೀರಿನಿಂದಾಗಿ ತೋಡಿದ ಬಾವಿಗಳಲ್ಲಿ ಒಗರು ನೀರು ಬರುತ್ತದೆ. ಇಂತಹ ಕುದ್ರುಗಳಿಗೆ ಸರಿಯಾಗಿ ನೀರು ಸರಬುರಾಜು ಮಾಡಬೇಕು.

ಸಂಪರ್ಕ ಸೇತುವೆಗಳಿಲ್ಲದ ಕುದ್ರುಗಳಿಗೆ ಸಂಪರ್ಕಕ್ಕಾಗಿ ಸೇತುವೆಯ ನಿರ್ಮಾಣ ಮಾಡಬೇಕು. ಇತ್ತೀಚಿಗೆ ಕೆಲವು ದ್ವೀಪನಿವಾಸಿಗಳನ್ನು ಒಕ್ಕಲೆಬ್ಬಿಸಿ, ಬಂಡವಾಳಶಾಹಿಗಳು ರೆಸಾರ್ಟ್ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ರೆಸಾರ್ಟ್ ನೆಪದಲ್ಲಿ ಮತ್ತು ಪ್ರವಾಸೋದ್ಯಮದ ನೆಪದಲ್ಲಿ ಕುದ್ರುಗಳ ಮೂಲ ಸ್ವರೂಪ ಬದಲಾಗದಂತೆ ರಕ್ಷಿಸುವ ಹೊಣೆ ನಮ್ಮದಾಗಿದೆ. ಏಕೆಂದರೆ ಕುದ್ರುಗಳು ಉಳಿದರೆ ಮಾತ್ರ ಸಮತೋಲಿತ ಜೈವಿಕ ಪರಿಸರ ಉಳಿಯಲು ಸಾಧ್ಯ.

ನಾಗರಾಜ ಖಾರ್ವಿ ಕಂಚುಗೋಡು

 

Leave a Reply

Your email address will not be published. Required fields are marked *