ಶ್ರೀ ತುಳಸಿ ದಯೆ ತೋರಮ್ಮ

ಶುಭಪ್ರದವಾದ ಕಾರ್ತಿಕ ಮಾಸದಲ್ಲಿ ದೀಪಾವಳಿಯ ನಂತರ ಬರುವ ಹಬ್ಬವೇ ತುಳಸಿ ಹಬ್ಬ. ಇದನ್ನು ಸಣ್ಣ ದೀಪಾವಳಿ ಅಂತಲೂ ಕರೆಯುತ್ತಾರೆ ಇದೇ ಮಾಸದಲ್ಲಿ ಹಲವಾರು ದೇವಸ್ಥಾನಗಳ ದೀಪೋತ್ಸವ ಮತ್ತು ವಾರ್ಷಿಕ ಭಜನಾ ಸಪ್ತಾಹಗಳು ಕೂಡಾ ನಡೆಯುತ್ತದೆ. ತುಳಸಿ ಎಂಬ ಶಬ್ದದ ಅರ್ಥವೇ ಸಾಟಿಯಿಲ್ಲದ್ದು ಎಂದು. ಅದಕ್ಕೆ ಪಾವನಿ, ದೇವದುಂಧುಬಿ ಎಂಬೆಲ್ಲಾ ಹೆಸರುಗಳಿವೆ. ತುಳಸಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಗಳನ್ನು ನಾಶ ಮಾಡುವ ಶಕ್ತಿ ಇರುವುದರಿಂದ ತುಳಸಿಗೆ ಆಯುರ್ವೇದದಲ್ಲಿ ಭೂತಘ್ನಿ,ಅಪೇತರಾಕ್ಷಸಿ ಎಂಬಿತ್ಯಾದಿ ಹೆಸರುಗಳಿಂದ ಕರೆದಿದ್ದಾರೆ.

ನಮ್ಮ ಪುರಾಣಗಳ ಪ್ರಕಾರ ಸಮುದ್ರ ಮಥನದ ಕಾಲದಲ್ಲಿ ಲೋಕಕಲ್ಯಾಣಕ್ಕಾಗಿ ತುಳಸಿ ಜನ್ಮ ತಾಳಿದಳು ಎಂದು ಉಲ್ಲೇಖವಿದೆ. ಇನ್ನೊಂದು ಕಥೆಯ ಪ್ರಕಾರ ಕೃತಯುಗದಲ್ಲಿ ಶ್ರೀ ಮನ್ನಾರಾಯಣನ ಅರ್ಧಾಂಗಿಯಾಗಿದ್ದ ಶ್ರೀ ಮಹಾಲಕ್ಷ್ಮಿಯು ಭುವಿಗಿಳಿದು ಬಂದು, ತೇತ್ರಾಯುಗದಲ್ಲಿ ಸೀತೆಯಾಗಿಯೂ, ದ್ವಾಪರದಲ್ಲಿ ರುಕ್ಮಿಣಿಯಾಗಿಯೂ, ಕಲಿಯುಗದಲ್ಲಿ ತುಳಸಿಯಾಗಿಯೂ ಅವತರಿಸಿದಳೆಂದು ಪ್ರತೀತಿ ಇದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಬಹು ಶ್ರೇಷ್ಠವಾದ ಸ್ಥಾನವಿದೆ. ಅದಕ್ಕೆ ಶ್ರೇಷ್ಠತೆ, ಉತ್ಕೃಷ್ಟತೆ, ಪಾವಿತ್ರ್ಯತೆ ದೈವಿಕತೆ ಕೊಡಲಾಗಿದೆ. ಆದ್ದರಿಂದ ತುಳಸಿಯು ಸಾಕ್ಷಾತ್ ಲಕ್ಮಿಯೆಂದು ಪೂಜಿಸಲ್ಪಡುತ್ತದೆ.

ಭಗವಾನ್ ವಿಷ್ಣುವು ಜಗದ್ರಕ್ಷಕನು ತುಳಸಿಯು ಸಕಲ ಜೀವ ರಾಶಿಗಳ ಶರೀರಾರೋಗ್ಯವನ್ನು ಕಾಪಾಡುತ್ತಾಳೆ ಹೀಗೆ ವಿಷ್ಣುವಿನ ಜಗದ್ರಕ್ಷಣೆಯ ಕಾರ್ಯದಲ್ಲಿ ಸಹಕಾರ ನೀಡುವ ತುಳಸಿಯನ್ನು ವಿಷ್ಣು ಪ್ರಿಯೆ ಎಂದು ಕರೆದರೆ ತುಳಸಿಯನ್ನು ಮೋಕ್ಷಪ್ರದಾ ಎಂದು ಕರೆಯಲಾಗುತ್ತದೆ ಕೊನೆಯುಸಿರೆಳೆಯುವ ಮನುಷ್ಯನ ಬಾಯಿಗೆ ತುಳಸಿ ಎಲೆಯ ನೀರನ್ನು ಹಾಕುವುದು ಆತ ಮೋಕ್ಷ ಹೊಂದಲಿ ಎಂಬ ಉದ್ದೇಶದಿಂದ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ತುಳಸಿ ಗಿಡದಲ್ಲಿ ಮನುಷ್ಯನ ದೇಹಕ್ಕೆ ಬೇಕಾಗಿರುವ 27 ಲೋಹಾಂಶಗಳು ಇವೆಯೆಂದು ಸಾಬೀತಾಗಿದೆ. ತುಳಸಿಯಲ್ಲಿ ಉಪದ್ರವಕಾರಿ ಕ್ರಿಮಿಗಳನ್ನು ನಾಶ ಮಾಡುವ ಶಕ್ತಿ ಇರುವುದರಿಂದಲೇ ದೇವರ ತೀರ್ಥದಲ್ಲಿ ತುಳಸಿ ದಳವನ್ನು ಹಾಕುತ್ತಾರೆ. ತುಳಸಿ ಗಾಳಿ ಸೇವನೆ ಆರೋಗ್ಯಕರ ಗ್ರಹಣಕಾಲದಲ್ಲಿ ಆಹಾರ ಪದಾರ್ಥಗಳ ಮೇಲೆ ತುಳಸಿದಳವನ್ನು ಹಾಕಿಡುತ್ತಾರೆ. ನೀರು ವಿಷವಾಗದಂತೆ ತುಂಬಿಟ್ಟ ನೀರಿನಲ್ಲಿ ತುಳಸಿದಳವನ್ನು ಹಾಕುತ್ತಾರೆ ಪೂಜೆ ಪುರಸ್ಕಾರಗಳಲ್ಲಿ ತುಳಸಿ ಇರಲೇಬೇಕು ಶ್ರೀ ಕೃಷ್ಣನಿಗೆ ತುಳಸಿ ತುಂಬಾ ಪ್ರಿಯ ಶ್ರೀ ಕೃಷ್ಣನ ಪೂಜೆಗೆ ತುಳಸಿಹಾರ ಇರಲೇಬೇಕು ತುಳಸಿಕಟ್ಟೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಪೂಜಿಸುವುದರ ಉದ್ದೇಶವೆಂದರೆ ಅದು ದುಷ್ಟ ಜಂತುಗಳನ್ನು ಮನೆಯ ಒಳಗಡೆ ಪ್ರವೇಶ ಮಾಡಲು ಬಿಡುವುದಿಲ್ಲ ಎಂಬ ಕಾರಣಕ್ಕೆ.

ಹೀಗೆ ಲೌಕಿಕ, ವೈಜ್ಞಾನಿಕ, ಆಧ್ಯಾತ್ಮಿಕ, ಯಾವುದೇ ದೃಷ್ಟಿಯಲ್ಲಿ ನೋಡಿದರೂ ತುಳಸಿ ಪೂಜಾರ್ಹಳೆಂದು ತಿಳಿದುಬಂದಿರುವುದರಿಂದ ತುಳಸಿ ಗಿಡವನ್ನು ಮನೆಯ ಮುಂಭಾಗದಲ್ಲಿ ತುಳಸಿಕಟ್ಟೆಯಲ್ಲಿ ಬೆಳೆಸಿ ಪೂಜಿಸುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ ಮಹಾವಿಷ್ಣುವು ಕಾರ್ತಿಕ ಮಾಸದ ಶುಕ್ಲಪಕ್ಷದ ಒಂಬತ್ತನೇ ದಿನದಿಂದ ಹುಣ್ಣಿಮೆಯ ದಿನಗಳವರೆಗೆ ನೆಲ್ಲಿಕಾಯಿ ಮರದಲ್ಲಿ ನೆಲೆಸಿರುತ್ತಾನೆ. ಇದೇ ಕಾರಣದಿಂದ ಬೆಟ್ಟದ ನೆಲ್ಲಿಕಾಯಿ ಮರದ ಫಲಭರಿತ ತುಂಡುಗಳನ್ನು ತುಳಸಿಯ ಗಿಡದೊಂದಿಗೆ ತುಳಸಿಕಟ್ಟೆಯಲ್ಲಿ ತುಳಸಿಪೂಜೆಯ ದಿನ ನೆಡುತ್ತಾರೆ.ಇದು ಮಹಾವಿಷ್ಣುವಿನೊಂದಿಗೆ ತುಳಸಿ ವಿವಾಹ ನೇರವೇರುತ್ತದೆ ಎಂಬುದರ ಸಂಕೇತ.ಆ ದಿನ ತುಳಸಿಕಟ್ಟೆ ನವವಧುವಿನಂತೆ ಸಿಂಗಾರಗೊಳ್ಳುತ್ತದೆ. ತುಳಸಿ ಪೂಜೆ ದಿನ ಪ್ರಾರ್ಥನೆ ಸಲ್ಲಿಸಿದರೆ ಫಲಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿಕಟ್ಟೆಗೆ ಸೂತ್ತಲೂ ಕಬ್ಬಿನ ಜಲ್ಲೆಯನ್ನು ಕಟ್ಟಿ ಸಿಂಗರಿಸುತ್ತಾರೆ. ಇಲ್ಲಿ ಕಬ್ಬಿನ ಜಲ್ಲೆ ಸಾತ್ವಿಕ ಮನೋಕಾಮನೆಯ ಸಂಕೇತ ಶ್ರೀ ತುಳಸಿ ಭಕ್ತರ ಮನಸ್ಸಿಗೆ ಒಳ್ಳೆಯ ಕಾಮನೆಗಳನ್ನು ಕೊಡುತ್ತಾಳೆ ಎಂಬುದನ್ನು ಕಬ್ಬಿನ ಜಲ್ಲೆ ಸೂಚಿಸುತ್ತದೆ. ಪೃಕೃತಿಯ ಆರಾಧಕರಾದ ಭಾರತೀಯರು ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಗಿಡಮರಗಳನ್ನು ಪೂಜಿಸಿ ಗೌರವಿಸುತ್ತಾರೆ.

ಪ್ರತಿ ಸಂಸ್ಕೃತಿಯಲ್ಲೂ ಜೀವನ ಮೌಲ್ಯಗಳ ಶ್ರೇಣೀಕರಣವಿದ್ದು, ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶ ಅಡಕವಾಗಿರುತ್ತದೆ. ಭಾರತದಲ್ಲಿ ತುಳಸಿ ಗಿಡ ಸೇರಿದಂತೆ ಹಲವು ಸಸ್ಯಗಳು ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಅವುಗಳ ರಕ್ಷಣೆಗೆ ಸಹಕಾರಿಯಾಗಿದೆ. ಧರ್ಮ ಸಮ್ಮತವಾದ ಸಾಂಸ್ಕೃತಿಕ ಆಚರಣೆಗಳು ಪ್ರಾಣಿ ಪಕ್ಷಿ ಮತ್ತು ಸಸ್ಯಗಳ ಬಳಕೆಯ ಮೇಲೆ ನಿಯಂತ್ರಣ ತಂದು ಅವುಗಳ ಸಂರಕ್ಷಣೆಗೆ ನೆರವಾಗುತ್ತದೆ. ನೈಸರ್ಗಿಕ ಪರಿಸರವು ದೈವಿಕ ಪೃಕೃತಿಯ ಪ್ರತಿರೂಪವೆಂದೇ ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಉಲ್ಲೇಖವಾಗಿದೆ. ದೈವಿಕ ರೂಪದಲ್ಲಿ ಪೃಕೃತಿಯನ್ನು ಆರಾಧಿಸುವ ತುಳಸಿ ಹಬ್ಬದ ಸಂಭ್ರಮ ಸಡಗರ ಎಲ್ಲೆಡೆ ಮನೆ ಮಾಡಿದೆ. ಶ್ರದ್ಧೆ ಭಕ್ತಿಯಿಂದ ಸಂಪನ್ನಗೊಳ್ಳುವ ತುಳಸಿ ಪೂಜೆ ಹಬ್ಬ ಸರ್ವರಿಗೂ ಮಂಗಲವನ್ನುಂಟು ಮಾಡಲಿ ಎಂದು ಶುಭ ಹಾರೈಸುತ್ತೇನೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಶ್ರೀ ತುಳಸಿ ದಯೆ ತೋರಮ್ಮ

  1. ಇಂತಹ ಲೇಖನಗಳು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಸಂಪ್ರದಾಯಗಳ ಹಿಂದಿನ ತುಂಬಾ ವಿಜ್ಞಾನ, ಇತಿಹಾಸ ಮತ್ತು ಅದರ ಮೇಲಿನ ನಮ್ಮ ಪೂರ್ವಜರ ನಂಬಿಕೆಯ ವ್ಯವಸ್ಥೆಯನ್ನು ತಿಳಿಯಲು ಸಹಾಯ ಮಾಡುತ್ತದೆ. ಇಂತಹ ಇನ್ನಷ್ಟು ಲೇಖನಗಳಿಗಾಗಿ ಎದುರುನೋಡುತ್ತಿದ್ದೇನೆ.

Leave a Reply

Your email address will not be published. Required fields are marked *