ಮನೆಮಗಳ ಪ್ರಸವಕ್ಕೆ ಕಪ್ಪುದೈತ್ಯರ ಅಡ್ಡಗಾಲು

ತನಗೆ ಇಷ್ಟವಾದ ಕೆಲಸವನ್ನು ಮೂರ್ಖರು ಶ್ರದ್ಧೆಯಿಂದ ಮಾಡುತ್ತಾರೆ ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಕಪ್ಪುದೈತ್ಯರು ಪ್ರಸ್ತುತ ನಡೆಸುತ್ತಿರುವ ಲಜ್ಜೆಗೇಡಿ ಕೃತ್ಯಗಳಿಂದ ಸಾಬೀತಾಗಿದೆ. ಕಡಲಾಮೆಗಳ ಸುರಕ್ಷಿತ ತವರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಸರಗೋಡು ಟೊಂಕ ಕಡಲತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡಲು ಬರುತ್ತಿರುವುದು ಕಪ್ಪುದೈತ್ಯರ ನಿದ್ದೆಗೆಡಿಸಿದೆ.ಕಳೆದ ಎರಡು ವಾರದ ಹಿಂದೆ ಇಲ್ಲಿ ಕಡಲಾಮೆಗಳು ಮೊಟ್ಟೆ ಇಟ್ಟು ಸುದ್ದಿಯಾದ ಬಳಿಕ ಈ ದಿನ ಮುಂಜಾನೆ ಮತ್ತೆ ಕಡಲಾಮೆಗಳು ಇಲ್ಲಿ ಮೊಟ್ಟೆ ಇಟ್ಟು ಹೋಗಿದೆ.ಈ ವಿದ್ಯಮಾನದಿಂದ ತತ್ತರಿಸಿಹೋಗಿರುವ ಕಪ್ಪುದೈತ್ಯರು ತಮ್ಮ ಬೂಟುಕಾಲಿನಿಂದ ಕಡಲಾಮೆಗಳ ಹೆಜ್ಜೆಗುರುತುಗಳನ್ನು ಅಳಿಸಿಹಾಕಲು ಭಾರೀ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ಕಾಸರಕೋಡು ತವರಿನ ಮಕ್ಕಳಾದ ಕಡಲಾಮೆಗಳು ಈ ಪರಿಯಲ್ಲಿ ಕಪ್ಪುದೈತ್ಯರ ಜಂಘಾಬಲ ಅಡಗಿಸಿರುವುದು ನಿಜಕ್ಕೂ ಸೋಜಿಗದ ಸಂಗತಿ.

ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಗಳಿಗೆ ಈ ಕಪ್ಪುದೈತ್ಯರ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಮಹಾಸ್ವಾರ್ಥಿಗಳು ಮನವಿ ನೀಡಿ ಅಪರೋಕ್ಷವಾಗಿ ಕಾಸರಕೋಡು ಬಂದರು ನಿರ್ಮಾಣ ಕಾಮಗಾರಿಯನ್ನು ಪುನಾರಾರಂಭಿಸಲು ಅಲವತ್ತುಗೊಂಡಿದ್ದಾರೆ.ಸಮಾಜದ ವೇದಿಕೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ವೀರಾವೇಶದ ಭಾಷಣ ಬಿಗಿಯುವ ಮಹಾನ್ ನಾಯಕರು ಮುಂಚೂಣಿಯಲ್ಲಿ ನಿಂತು ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವುದು ಸಮಾಜದ್ರೋಹಿ ಚಿಂತನೆಯ ಪರಮಾವಧಿಯಾಗಿದೆ.

ಇಷ್ಟು ದಿನ ತೆರೆಮರೆಯಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಕಪಟ ನಾಟಕ ಸೂತ್ರಧಾರಿಗಳು ಇದೀಗ ನೇರವಾಗಿ ಅಂಕಣಕ್ಕೆ ಇಳಿದಿರುವುದು ಮಾಡು ಇಲ್ಲವೇ ಮಡಿ ಪಂದ್ಯವನ್ನು ನೆನಪಿಸುತ್ತದೆ. ಕಡಲಾಮೆಗಳ ಪ್ರಕರಣ ಹೈಲೈಟ್ ಆದ ಬಳಿಕ ಸಮಾಜದ್ರೋಹಿ ಚಿಂತನೆಯ ಈ ಗುಳ್ಳೆನರಿಗಳಿಗೆ ಕಪ್ಪುದೈತ್ಯರು ಭಾರೀ ಒತ್ತಡ ಹೇರುತ್ತಿದ್ದಾರೆ.ಕಪ್ಪುದೈತ್ಯರಿಂದ ಪ್ರಸಾದವನ್ನು ಸ್ವೀಕರಿಸಿ ಹೊಟ್ಟೆತುಂಬಿಸಿಕೊಂಡ ಈ ಗುಳ್ಳೆನರಿಗಳಿಗೆ ಅಸಹನೀಯ ಉದರಬೇನೆ ಉಂಟಾಗಿರುವುದು ಸುಳ್ಳಲ್ಲ.

ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಕಾಸರಕೋಡು ಟೊಂಕದಲ್ಲಿ ಕಡಲಾಮೆಗಳ ಸಂರಕ್ಷಿತ ಪ್ರದೇಶ ಘೋಷಣೆಯಾದರೆ ಮೀನುಗಾರಿಕೆಗೆ ತೊಂದರೆಯಾಗುತ್ತದೆ ಎಂಬ ಕಪೋಲಕಲ್ಪಿತ ವಿಷಯವನ್ನು ಪ್ರಸ್ತಾಪಿಸಿದ್ದಾರೆ.ಇದು ಹತಾಶೆಯ ಪರಮಾವಧಿಯಾಗಿದ್ದು,ಮೂರ್ಖತನದ ಸಂಕೇತವಾಗಿದೆ. ಕಾಸರಕೋಡು ಟೊಂಕ ಕಡಲತೀರ ಕಡಲಾಮೆಗಳ ವಿಶಿಷ್ಟ ಪ್ರಭೇಧದ ಕಡಲಾಮೆಗಳ ತವರಾಗಿದ್ದು ಹಲವಾರು ವರ್ಷಗಳಿಂದ ಇಲ್ಲಿ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಮೀನುಗಾರರು ಅತೀವ ಕಾಳಜಿಯಿಂದ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿ ಮಾಡಿ ಬಿಡುತ್ತಿದ್ದಾರೆ.ಕುಂದಾಪುರ ಕೋಡಿ ಕಡಲಕಿನಾರೆಯಲ್ಲಿ FSL ಸಂಸ್ಥೆ,ಸ್ಥಳೀಯ ಮೀನುಗಾರರು ಮತ್ತು ಪರಿಸರಪ್ರಿಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಕಡಲಾಮೆಗಳ ಸಂರಕ್ಷಣಾ ಪ್ರದೇಶ ನಿರ್ಮಾಣ ಮಾಡಿದೆ.ಇಲ್ಲಿ ಮೀನುಗಾರಿಕೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ.ಸ್ವತಹಾ ಮೀನುಗಾರರೇ ಕಡಲಿನ ಅಪೂರ್ವ ಜೀವವೈವಿಧ್ಯತೆಯಾಗಿರುವ ಕಡಲಾಮೆಗಳನ್ನು ಸ್ವಯಂಪ್ರೇರಿತರಾಗಿ ರಕ್ಷಣೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಭಟ್ಕಳದ ಜಾಲಿ ಕಡಲಕಿನಾರೆಯಲ್ಲಿ ಕಡಲಾಮೆಗಳ ಸಂರಕ್ಷಣಾ ಕೇಂದ್ರವಿದೆ.ಇಲ್ಲಿಯೂ ಮೀನುಗಾರರು ಜತನದಿಂದ ಕಡಲಾಮೆಗಳನ್ನು ರಕ್ಷಣೆ ಮಾಡುತ್ತಿದ್ದಾರೆ.ತೊಂದರೆಯಾಗುವುದು ಮೀನುಗಾರಿಕೆಗೆ ಅಲ್ಲ,ಪರಿಸರ ವಿರೋಧಿ,ಜನವಿರೋಧಿ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ಎಂಬುದು ತುಂಬಾ ಸ್ಪಷ್ಟ. ಕಡಲಾಮೆಗಳು ಇಲ್ಲಿ ಪದೇ ಪದೇ ಕಾಣಿಸಿಕೊಂಡು ತಮ್ಮ ತವರಿನ ನೆಲದ ಹಕ್ಕನ್ನು ಪ್ರತಿಪಾದಿಸುತ್ತಿರುವುದರಿಂದ ಗಾಬರಿಗೊಂಡ ಕಪ್ಪುದೈತ್ಯರು ತಮ್ಮಿಂದ ಮೃಷ್ಟಾನ್ನ ಭೋಜನವನ್ನುಂಡ ಸಮಾಜದ್ರೋಹಿಗಳನ್ನು ಛೂ ಬಿಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬಂದರು ನಿರ್ಮಾಣ ಕಾಮಗಾರಿಯ ನೆಪದಲ್ಲಿ ಶರಾವತಿಯ ಆಳಿವೆಯ ತಳವನ್ನು ಅವೈಜ್ಞಾನಿಕವಾಗಿ ಬಗೆಯಲಾಗಿದೆ.ಆಳಿವೆಯ ಹೂಳನ್ನು ತೆಗೆದು ಶರಾವತಿ ನದಿಗೆ ಸುರಿಯಲಾಗುತ್ತಿದೆ. ಇದು ಬ್ರೇಕ್ ವಾಟರ್ ಕಾಮಗಾರಿಯಲ್ಲ.ಹೊನ್ನಾವರ ಬರ್ಬಾದ್ ಮಾಡುವ ಕಾಮಗಾರಿ.ಶರಾವತಿ ನದಿಪಾತ್ರವನ್ನು ಹಾಳುಗೆಡುಹುವ ಕಾಮಗಾರಿ.ತೆಗೆಯಲಾದ ಹೂಳನ್ನು ನಿರ್ಜನ ಭೂಪ್ರದೇಶದಲ್ಲಿ ಹಾಕುತ್ತಾರೆ ವಿನಹಾ ಪುನಃ ನದಿಪಾತ್ರಕ್ಕೆ ಹಾಕುವುದೆಂದರೆ ಮೂರ್ಖತನವಲ್ಲವೇ?

ಬ್ರೇಕ್ ವಾಟರ್ ಕಾಮಗಾರಿಯ ಬಗ್ಗೆ ಕಪ್ಪುದೈತ್ಯರಿಗೆ ಮತ್ತು ಅವರ ಹಿಂಬಾಲಕರಿಗೆ ಮಾಹಿತಿಯ ಕೊರತೆ ಇದ್ದರೆ ಪ್ರಸ್ತುತ ಭಟ್ಕಳದ ತೆಂಗಿನಗುಂಡಿ ಮತ್ತು ಆಳ್ವೇಕೋಡಿಯ ಕಡಲತೀರದ ಬ್ರೇಕ್ ವಾಟರ್ ಕಾಮಗಾರಿಯನ್ನು ಪರಿಶೀಲನೆ ಮಾಡುವುದು ಒಳಿತು. ಜೀವನದಿ ಶರಾವತಿ ಸಂಗಮವಾಗುವ ಕಾಸರಕೋಡು ಟೊಂಕದ ಕಡಲತೀರ ಅತೀ ಸೂಕ್ಷ್ಮ ಪ್ರದೇಶವಾಗಿದ್ದು,ಅಪರೂಪದ ಜೀವವೈವಿಧ್ಯತೆಗಳ ಅಪೂರ್ವ ತಾಣ.ಇಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮೀನುಗಾರಿಕೆ ಮತ್ತು ಮೀನುಗಾರರ ಬದುಕು ಸರ್ವನಾಶವಾಗುತ್ತದೆ.

ಗೋವಾದಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಆಗಿರುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ.ವಾಣಿಜ್ಯ ಬಂದರಿನಲ್ಲಿ ಕಲಿದ್ದಲು ಆಮದು ರಪ್ತು ಪ್ರಕ್ರಿಯೆಯ ಪರಿಣಾಮದಿಂದ ಬಂದರು ಪ್ರದೇಶದ ಆಳಿವೆಯಲ್ಲಿ ಕಲ್ಲಿದ್ದಲು ತ್ಯಾಜ್ಯ ಸಂಗ್ರಹವಾಗಿದ್ದು,ಹಲವು ಜಾತಿಯ ಮೀನುಗಳು,ಜಲಚರಗಳು ಸರ್ವನಾಶವಾಗಿದೆ.ಅಲ್ಲಿನ ಮೀನುಗಾರರಿಗೆ ಈ ಮೊದಲು ಹತ್ತಿರದಲ್ಲಿ ಮೀನು ಸಿಗುತ್ತಿತ್ತು.ಆದರೆ ಈಗ ಗೋವಾದ ಮೀನುಗಾರರು ಮೀನಿಗಾಗಿ ಕಡಲಿನಲ್ಲಿ ಬಲುದೂರ ಸಾಗಬೇಕಾದ ಪರಿಸ್ಥಿತಿ ಬಂದಿದೆ.ಅಕ್ಕಪಕ್ಕದ ಮನೆಗಳಲ್ಲಿ ಕಲ್ಲಿದ್ದಲು ದೂಳು ವ್ಯಾಪಿಸಿಕೊಂಡು ಅವರ ಬದುಕು ರೋಗಗ್ರಸ್ತವಾಗಿದೆ.ಜೀವನ ಬರ್ಬಾದ್ ಆಗಿದೆ.ಇಂತಹ ದುಸ್ಥಿತಿ ನಾಳೆ ಕೇವಲ ಕಾಸರಕೋಡು ಮಾತ್ರವಲ್ಲ ಇಡೀ ಹೊನ್ನಾವರವನ್ನೇ ಭಾಧಿಸಲ್ಪಡುವುದರಲ್ಲಿ ಸಂಶಯವೇ ಇಲ್ಲ. ಸಾವಿರ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೇ ನರಳುತ್ತಿರುವಾಗ ಧನಿಕನೊಬ್ಬ ಮೃಷ್ಟಾನ್ನ ಭೋಜನ ಉಂಡು ಮಜಾ ಉಡಾಯಿಸುವ ಬಂಡವಾಳಶಾಹಿ ಕರಾಳ ಸ್ವರೂಪದ ಖಾಸಗಿ ವಾಣಿಜ್ಯ ಬಂದರು ಯೋಜನೆಯ ವಿರುದ್ಧ ಬಹೃತ್ ಜನಾಂದೋಲನ ರೂಪುಗೊಳ್ಳಬೇಕಾಗಿದೆ. ಇದು ಕೇವಲ ಮೀನುಗಾರರ ಅಳಿವು ಉಳಿವಿನ ಪ್ರಶ್ನೆ ಮಾತ್ರವಲ್ಲ.ಇಡೀ ಹೊನ್ನಾವರ ನಾಗರಿಕರ ಜೀವನದ ಪ್ರಶ್ನೆಯಾಗಿರುತ್ತದೆ.

ಕಾಲ ಎಲ್ಲರ ಕಾಲು ಎಳೆಯುತ್ತದೆ.ಸಾಂಧರ್ಭಿಕ ಸನ್ನಿವೇಶಗಳು ಅಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.ಪ್ರತಿಯೊಂದು ಆರಂಭಕ್ಕೂ ಅಂತ್ಯವೆಂಬುದು ಇದ್ದೇ ಇರುತ್ತದೆ.ಅದು ಕೆಲವು ಸಂದರ್ಭದಲ್ಲಿ ಸ್ವಲ್ಪ ತಡವಾಗಿ ಘಟಿಸಬಹುದು.ನಾಟಕದ ಪಾತ್ರಧಾರಿಗಳು ತಮ್ಮ ಪಾತ್ರ ಮುಗಿದ ತಕ್ಷಣ ವೇಷಭೂಷಣ ತೆಗೆಯಲೇ ಬೇಕು.

ಎರಡು ವಾರದ ಹಿಂದೆ ಕಡಲಾಮೆಗಳು ತನ್ನ ತವರಾದ ಕಾಸರಕೋಡು ಟೊಂಕ ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅದರ ಸಂರಕ್ಷಣೆಗೆ ಅರಣ್ಯ ಇಲಾಖೆ ಪಂಜರವನ್ನಿಟ್ಟುಕೊಂಡು ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಂಡಿತ್ತು.ಇದರಿಂದ ವಿಚಲಿತಗೊಂಡ ಕಪ್ಪುದೈತ್ಯರು ಏನಾದರೂ ಹೊಸ ನಾಟಕ ಆರಂಭಿಸಬಹುದು ಎಂದು ಜನರು ಆಡಿಕೊಳ್ಳುತ್ತಿದ್ದರು.ಜನರ ಊಹೆ ಸುಳ್ಳಾಗಲಿಲ್ಲ.ಕಡಲಾಮೆಗಳಿಂದ ಮೀನುಗಾರಿಕೆಗೆ ತೊಂದರೆ ಎಂಬ ಹೊಸ ಕಪಟ ನಾಟಕ ನಡೆಯಿತು.ಇಷ್ಟು ದಿನ ಇಂತಹ ಕಪಟ ನಾಟಕಗಳನ್ನು ನಿರ್ದೇಶಿಸುತ್ತಿದ್ದ ಮಹಾನುಭಾವ ಈ ಬಾರಿ ಅನಿವಾರ್ಯವಾಗಿ ಈ ಕಪಟ ನಾಟಕದ ಪ್ರಮುಖ ಪಾತ್ರಧಾರಿಯಾಗಬೇಕಾಯಿತು.ನಾಟಕದ ನೇರ ಪ್ರಸಾರ ಇದ್ದಿದರಿಂದ ಮಹಾನುಭಾವನ ಮುಖದರ್ಶನವಾಯಿತು.ಈ ದಿನ ಕಡಲಾಮೆಗಳು ಮತ್ತೆ ತಮ್ಮ ತವರಿಗೆ ಬಂದು ಮೊಟ್ಟೆ ಇಟ್ಟು ಹೋಗಿವೆ.ಗಾಬರಿಗೊಂಡ ಕಪ್ಪುದೈತ್ಯರಿಂದ ಕಡಲಾಮೆಗಳ ಹೆಜ್ಜೆಗುರುತುಗಳನ್ನು ಅಳಿಸುವ ಪ್ರಕ್ರಿಯೆ ನಡೆದಿದೆ.ಅಳಿಸುವ ಯತ್ನ ಮಾಡಿರಬಹುದು.ಆದರೆ ಶತಶತಮಾನಗಳಿಂದ ಕಡಲಾಮೆಗಳು ತನ್ನ ತವರಾದ ಕಾಸರಕೋಡು ಟೊಂಕ ಕಡಲತೀರದಲ್ಲಿ ನಡೆಸಿಕೊಂಡು ಬಂದ ವಂಶಾಭಿವೃಧ್ಧಿ ಪ್ರಕ್ರಿಯೆಗಳ ಇತಿಹಾಸದ ದಾಖಲಾತಿಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.ಅದು ಕಾಲವೂ ಕೂಡಾ ಅಳಿಸಲು ಅಳುಕುವಂತಹ ಅಭೂತಪೂರ್ವ ದಾಖಲೆಯಾಗಿದೆ.

ಕುಚೋದ್ಯದ ಸಂಗತಿಯೆಂದರೆ ಈ ಕಪ್ಪುದೈತ್ಯರ ಪ್ರತಿನಿಧಿಗಳು ತಮ್ಮ ಕುಟಿಲ ತಂತ್ರಗಾರಿಕೆಯನ್ನು ಉದ್ದೀಪನಗೊಳಿಸಲು ಕಡಲಾಮೆಗಳನ್ನು ಬಳಸಿಕೊಂಡು ಹೈಲೈಟ್ ಮಾಡಿದ್ದಾರೆ.ಕಪ್ಪುದೈತ್ಯರ ಈ ಪರಿಯ ಅವಸ್ಥೆ ಕಂಡು ಕಡಲಾಮೆಗಳು ಗಹಗಹಿಸಿ ನಗುತ್ತಿವೆ.ಕಪ್ಪುದೈತ್ಯರು ಮತ್ತೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.ಇವತ್ತು ಕಡಲಾಮೆಗಳು ಮತ್ತೆ ಕಡಲತೀರದಲ್ಲಿ ಮೊಟ್ಟೆ ಇಟ್ಟ ಸುದ್ದಿ ತಿಳಿಯುತ್ತಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಮೊಟ್ಟೆಗಳನ್ನು ಸಂರಕ್ಷಣೆ ಮಾಡಲು ಪಂಜರವನ್ನಿಟ್ಟಿದ್ದಾರೆ. ಇಲ್ಲಿ ಡಿಸೆಂಬರ್ 29 ಮತ್ತು ಇವತ್ತು ಪತ್ತೆಯಾದ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿ ಮಾಡಿ ಕಡಲಿಗೆ ಬಿಡುವ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ. ಬೆನ್ನು ಬೆನ್ನಿಗೆ ಖತರನಾಕ್ ತಂತ್ರಗಾರಿಕೆ ರೂಪಿಸಿ ಕತ್ತಿ ಮಸೆಯುತ್ತಿರುವ ಕಪ್ಪು ದೈತ್ಯರಿಂದ ಕಡಲಾಮೆಗಳ ಮೊಟ್ಟೆಗಳನ್ನು ರಕ್ಷಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.

ಉಮಾಕಾಂತ ಖಾರ್ವಿ
ಕುಂದಾಪುರ

Leave a Reply

Your email address will not be published. Required fields are marked *